200 ಸ್ಥಾನ ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಸವಾಲ್‌

| Published : Apr 01 2024, 12:54 AM IST / Updated: Apr 01 2024, 05:06 AM IST

ಸಾರಾಂಶ

ಪ.ಬಂಗಾಳದಲ್ಲಿ ಸಿಎಎ ಜಾರಿಗೆ ಬಿಡಲ್ಲ ಎಂದು ಸಿಎಂ ದೀದಿ ಪುನರುಚ್ಚರಿಸಿದ್ದಾರೆ

ಕೃಷ್ಣಾನಗರ: ಬಿಜೆಪಿ ಈ ಬಾರಿ 400 ಸ್ಥಾನ ಗೆಲ್ಲುವ ಕನಸು ಕಾಣುತ್ತಿದೆ. ಆದರೆ ಮೊದಲಿಗೆ 200 ಸ್ಥಾನ ಗೆದ್ದು ತೋರಿಸಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.

ತಮ್ಮ ಹಣೆಗೆ ಗಾಯವಾದ ಬಳಿಕ ಮೊದಲ ಬಾರಿಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಮಮತಾ, ‘ಬಿಜೆಪಿಯು 2021ರ ವಿಧಾನಸಭಾ ಚುನಾವಣೆಯಲ್ಲಿಯೂ ಪಶ್ಚಿಮ ಬಂಗಾಳದಲ್ಲಿ 200 ಸ್ಥಾನ ಗೆಲ್ಲುವುದಾಗಿ ಸಾರುತ್ತಿತ್ತು. ಬಳಿಕ ಕೇವಲ 77 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಅದರಂತೆ ಈ ಬಾರಿ 400ರ ಬದಲಿಗೆ ಮೊದಲು 200 ಸ್ಥಾನಗಳಲ್ಲಿ ಗೆದ್ದು ತೋರಿಸಲಿ’ ಎಂದು ಸವಾಲು ಹಾಕಿದರು.

ಸಿಎಎ ಜಾರಿಗೆ ಬಿಡಲ್ಲ: ‘ಸಿಎಎಗೆ ಅರ್ಜಿ ಹಾಕಿದಲ್ಲಿ ಅವರನ್ನು ಪರಕೀಯರು ಎಂದು ಹಣೆಪಟ್ಟಿ ಕಟ್ಟುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಯಾರೂ ಸಿಎಎ ಪೌರತ್ವಕ್ಕೆ ಅರ್ಜಿ ಸಲ್ಲಿಸಬಾರದು ಎಂದು ವಿನಂತಿಸುವೆ. ಜೊತೆಗೆ ಸಿಎಎ/ ಎನ್‌ಆರ್‌ಸಿಯನ್ನು ನಮ್ಮ ರಾಜ್ಯದಲ್ಲಿ ಜಾರಿ ಮಾಡಲು ಖಂಡಿತ ಬಿಡುವುದಿಲ್ಲ’ ಎಂದು ಗುಡುಗಿದರು.

ರಾಜ್ಯದಲ್ಲಿ ಇಂಡಿಯಾ ಕೂಟ ಅಸ್ತಿತ್ವದಲ್ಲಿಲ್ಲ: ‘ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ ಇಲ್ಲವೇ ಇಲ್ಲ. ಅದರ ಭಾಗವಾಗಿರುವ ಕಾಂಗ್ರೆಸ್‌ ಮತ್ತು ಸಿಪಿಎಂ ಬಿಜೆಪಿ ಜೊತೆಗೆ ಒಳಒಪ್ಪಂದ ಮಾಡಿಕೊಂಡಿವೆ’ ಎಂದು ಕಿಡಿ ಕಾರಿದರು.