ಸಾರಾಂಶ
ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಶಿವಕುಮಾರ್ ಕೊನೆಗೂ ಸೆರೆ ಸಿಕ್ಕಿದ್ದಾನೆ.
ಲಖನೌ: ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಶಿವಕುಮಾರ್ ಕೊನೆಗೂ ಸೆರೆ ಸಿಕ್ಕಿದ್ದಾನೆ. ಉತ್ತರಪ್ರದೇಶದಿಂದ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಮುಂಬೈ ಅಪರಾಧ ವಿಭಾಗ ಮತ್ತು ಉತ್ತರಪ್ರದೇಶದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾನುವಾರ ಶಿವಕುಮಾರ್ ಸಿಕ್ಕಿಬಿದ್ದಿದ್ದಾನೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 23ಕ್ಕೆ ಏರಿದೆ.
ಬಂಧನದ ಬೆನ್ನಲ್ಲೇ ತಾನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನವನು ಎಂದು ಶಿವಕುಮಾರ್ ಗೌತಮ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅ.12ರಂದು ಮುಂಬೈನಲ್ಲಿ ಬಾಬಾ ಸಿದ್ಧಿಕಿ ಅವರು ತಮ್ಮ ಪುತ್ರ ಜೀಶನ್‌ರ ಕಚೇರಿಯಿಂದ ಹೊರಬರುವ ವೇಳೆ ಮೂವರ ಗುಂಪು ಗುಂಡಿನ ದಾಳಿ ನಡೆಸಿ ಬಾಬಾ ಸಿದ್ಧಿಕಿ ಅವರನ್ನು ಹತ್ಯೆ ಮಾಡಿತ್ತು. ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಲ್ಮಾನ್ ಖಾನ್‌ಗೆ ಬಾಬಾ ಸಿದ್ಧಿಕಿ ಆಪ್ತ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು. ಬಿಷ್ಣೋಯಿ ಸಮುದಾಯದ ನಾಯಕ ಲಾರೆನ್ಸ್ ಬಿಷ್ಣೋಯಿನ ಅನ್ಮೋಲ್ ಬಿಷ್ಣೋಯಿ ಸೂಚನೆ ಮೇರೆಗೆ ಶಿವಕುಮಾರ್ ಮತ್ತು ಆತನ ತಂಡ ಈ ಕೃತ್ಯ ಎಸಗಿತ್ತು.