ವೀರ‘ಭದ್ರ’ಕೋಟೆ ಭೇದಿಸಲು ಕಂಗನಾ ಹೋರಾಟ!

| Published : Apr 23 2024, 12:51 AM IST / Updated: Apr 23 2024, 07:00 AM IST

ಸಾರಾಂಶ

ಮಂಡಿಯಲ್ಲಿ ಬಾಲಿವುಡ್‌ ನಟಿಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕ್ಷೇತ್ರ ಉಳಸಿಕೊಳ್ಳಲು ವೀರಭದ್ರ-ಪ್ರತಿಭಾ ಪುತ್ರ ವಿಕ್ರಮಾದಿತ್ಯರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರ ಈ ಸಲ ಇಡೀ ದೇಶದ ಗಮನ ಸೆಳೆದಿದೆ. ಏಕೆಂದರೆ ಹಿರಿಯ ಕಾಂಗ್ರಎ್ಸಿಗ ವೀರಭದ್ರ ಸಿಂಗ್‌ ಅವರ ಭದ್ರಕೋಟೆಯಾದ ಇಲ್ಲಿ ಭಾರತೀಯ ಜನತಾ ಪಕ್ಷವು ನಟಿ-ರಾಜಕಾರಣಿ ಕಂಗನಾ ರಣಾವತ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಕೂಡ ತಾನೇನೂ ಕಮ್ಮಿ ಇಲ್ಲ ಎಂದು ಕ್ಷೇತ್ರ ಉಳಿಸಿಕೊಳ್ಳಲು ರಾಜ್ಯದ ಪ್ರಭಾವಿ ಯುವ ಸಚಿವ ಹಾಗೂ ರಾಜಮನೆತನದ ವಿಕ್ರಮಾದಿತ್ಯ ಸಿಂಗ್ ಅವರನ್ನು ಅಖಾಡಕ್ಕೆ ಇಳಿಸಿದೆ.

 ಹೀಗಾಗಿ ಈ ಚುನಾವಣೆಯು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರ ನಿರ್ವಹಿಸಿದ್ದ ಸಿನಿಮಾದ ‘ರಾಣಿ’ ಹಾಗೂ ಹಿಮಾಚಲದ ‘ರಾಜ’ನ ನಡುವೆ ನಡೆದಿದೆ ಎನ್ನಲು ಅಡ್ಡಿಯಿಲ್ಲ.ಬಿಜೆಪಿ ಈ ಸಲ ಕಂಗನಾಗೆ ಟಿಕೆಟ್‌ ನೀಡಿ ಅಚ್ಚರಿ ಮೂಡಿಸಿತು. ಇದು ಕಾಂಗ್ರೆಸ್ಸನ್ನು ಗೊಂದಲಕ್ಕೆ ಈಡು ಮಾಡಿತು. ಹೀಗಾಗಿ ಮಂಡಿ ಕ್ಷೇತ್ರದ ಪ್ರಭಾವಿ ಆಗಿದ್ದರೂ, 2021ರ ಲೋಕಸಭೆ ಉಪಚುನಾವಣೆಯಲ್ಲಿ ಇಲ್ಲಿ ಗೆದ್ದಿದ್ದ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌, ಕಣದಿಂದ ಹಿಂದೆ ಸರಿದಿದ್ದಾರೆ. ಪುತ್ರ ಹಾಗೂ ಸಚಿವ ವಿಕ್ರಮಾದಿತ್ಯ ಸಿಂಗ್‌ಗೆ ಟಿಕೆಟ್‌ ಕೊಡಿಸಿ ಕಣ ರಂಗೇರುವಂತೆ ಮಾಡಿದ್ದಾರೆ.

ಕಂಗನಾ ಸವಾಲು:ಕಂಗನಾ ರಾಣಾವತ್‌ ಮುಂಬೈನಲ್ಲಿ ಚಿತ್ರರಂಗದ ಛಾಪು ಮೂಡಿಸಿ ಗಮನ ಸೆಳೆದವರು. ಮೂಲತಃ ಹಿಮಾಚಲ ಪ್ರದೇಶದವರು. ಕಳೆದ 5 ವರ್ಷದಿಂದ ಮೋದಿ ಸರ್ಕಾರದ ಪರ ಹೇಳಿಕೆ ನೀಡಿ ಗಮನ ಸೆಳೆದವರು. ಹೀಗಾಗಿ ಅವರಿಗೆ ಬಿಜೆಪಿ ಅವಕಾಶ ನೀಡಬಹುದು ಎಂಬ ವದಂತಿ ಇತ್ತು. ಅದು ಈಗ ನಿಜವಾಗಿದೆ. ಮಂಡಿ ಕ್ಷೇತ್ರದಿಂದ ಅವರಿಗೆ ಟಿಕೆಟ್ ಸಿಕ್ಕಿದೆ.ಕಂಗನಾಗೆ ಈಗ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಜೈ ರಾಮ್ ಠಾಕೂರ್ ಅವರ ಬೆಂಬಲ ಲಭಿಸಿದೆ.ಇದಲ್ಲದೆ, 2021 ರಲ್ಲಿ ಪ್ರತಿಭಾ ಸಿಂಗ್ ವಿರುದ್ಧ 7,490 ಮತಗಳ ಅಂತರದಿಂದ ಸೋತಿದ್ದ ಬಿಜೆಪಿ ನಾಯಕ ಮತ್ತು ಕಾರ್ಗಿಲ್ ಯುದ್ಧ ವೀರ ಕಯಶಾಲ್ ಠಾಕೂರ್ ಅವರು ಕಂಗನಾ ಅವರಿಗೆ ಬೆಂಬಲ ನೀಡಿದ್ದಾರೆ. 

ಈ ಕ್ಷೇತ್ರದಲ್ಲಿ 1 ಲಕ್ಷ ಮಾಜಿ ಸೈನಿಕರು ಇರುವುದು ಗಮನಾರ್ಹ.ಈ ಹಿಂದೆ ಕಂಗನಾ ರಣಾವತ್ ಅವರ ಉಮೇದುವಾರಿಕೆಯನ್ನು ವಿರೋಧಿಸಿದ್ದ ಬಿಜೆಪಿ ನಾಯಕ ಮತ್ತು ಕುಲು ಪಟ್ಟದ ರಾಜ ಮಹೇಶ್ವರ್ ಸಿಂಗ್ ಕೂಡ ಅವರಿಗೆ ತಮ್ಮ ಬೆಂಬಲ ನೀಡಿದ್ದಾರೆ. ಇದರ ಜತೆಗೆ ಸಹಜವಾಗಿ ಕಂಗನಾ, ‘ಮೋದಿ ಅಲೆ’ ನೆಚ್ಚಿದ್ದಾರೆ.ವಿಕ್ರಮಾದಿತ್ಯ ಪ್ರಭಾವಿ:ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಮತ್ತು ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಪ್ರಬಲ ರಾಜಕೀಯ ವಂಶಾವಳಿಯನ್ನು ಹೊಂದಿದ್ದಾರೆ. ಸಿಂಗ್ ಅವರ ತಂದೆ ಮತ್ತು ತಾಯಿ ಇಲ್ಲಿ ತಲಾ ಮೂರು ಬಾರಿ ಗೆದ್ದಿದ್ದಾರೆ. 2021 ರ ಲೋಕಸಭಾ ಉಪಚುನಾವಣೆಯಲ್ಲಿ, ಸಿಂಗ್ ತಮ್ಮ ತಾಯಿಯನ್ನು ಬೆಂಬಲಿಸಿ ಪ್ರಚಾರ ಮಾಡಿದ್ದರು.ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಂಗನಾ ಪ್ರಬಲಳಂತೆ ಕಾಣುತ್ತಿದ್ದಾರೆ. ಹೀಗಾಗಿ ಮಂಡಿ ಕ್ಷೇತ್ರವನ್ನು ಶತಾಯ ಗತಾಯ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷವು ತಾಯಿ ಪ್ರತಿಭಾ ಸಿಂಗ್‌ ಬದಲು ವಿಕ್ರಮಾದಿತ್ಯ ಸಿಂಗ್‌ಗೆ ಟಿಕೆಟ್ ನೀಡಿದೆ. ಈ ನಡುವೆ, ಕಂಗನಾ ಪ್ರಚಾರದ ವೇಳೆ ಕೆಲವು ಅಪ್ರಬುದ್ಧ ಹೇಳಿಕೆ/ಟೀಕೆಗಳನ್ನು ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ವಿಕ್ರಮಾದಿತ್ಯ, ತಮ್ಮ ಸಾಂಪ್ರದಾಯಿಕ ಪ್ರಭಾವಿ ಕ್ಷೇತ್ರ ಉಳಸಿಕೊಳ್ಳಲು ಟೊಂಕ ಕಟ್ಟಿ ನಿಂತಿದ್ದಾರೆ.

ವಿವಾದಗಳು:ಬಿಜೆಪಿಯಿಂದ ಕಂಗನಾರ ಸ್ಪರ್ಧೆ ಘೋಷಣೆಯಾದಂದಿನಿಂದ ಕಾಂಗ್ರೆಸ್‌ ಈ ಕ್ಷೇತ್ರದ ಬಗ್ಗೆ ಸದಾ ಒಂದಿಲ್ಲೊಂದು ಟೀಕೆಯಲ್ಲಿ ಮುಳುಗಿದೆ. 

ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಅವರು ಮಂಡಿಯಲ್ಲಿ ಈಗ ರೇಟ್‌ ಎಷ್ಟು ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದು ಬೆಳೆಯುತ್ತಲೇ ಸಾಗಿದೆ. ಇದಕ್ಕೆ ಕಂಗನಾ ಸಹ ತಕ್ಕ ಪ್ರತ್ಯುತ್ತರ ನೀಡುತ್ತಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಹಿಮಾಚಲದಲ್ಲಿ ಆರು ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಭೀಮಬಲ ಬಂದಂತಾಗಿದ್ದು, ಅವರನ್ನು ಬಳಸಿಕೊಂಡು ಕ್ಷೇತ್ರದ 17 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಬಿಜೆಪಿ ಶಾಸಕರೇ ಇರುವ ಲಾಭವನ್ನು ಪಡೆದುಕೊಂಡು ಹೆಚ್ಚಿನ ಮತಗಳಿಕೆ ಮಾಡುವತ್ತ ಬಿಜೆಪಿ ಎದುರು ನೋಡುತ್ತಿದೆ.