ದೆಹಲಿ ಮಾಜಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ 17 ತಿಂಗಳ ಬಳಿಕ ಜೈಲಿಂದ ಬಿಡುಗಡೆ

| Published : Aug 10 2024, 01:44 AM IST / Updated: Aug 10 2024, 04:50 AM IST

ಸಾರಾಂಶ

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧ ಬಂಧಿತರಾಗಿದ್ದ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದ್ದು, ಅದರ ಬೆನ್ನಲ್ಲೇ ಅವರು 17 ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ.

ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧ ಬಂಧಿತರಾಗಿದ್ದ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದ್ದು, ಅದರ ಬೆನ್ನಲ್ಲೇ ಅವರು 17 ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ.

ಅಬಕಾರಿ ಹಗರಣದ ಸಂಬಂಧ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಸಿಸೋಡಿಯಾ ಅವರನ್ನು ಸಿಬಿಐ ಮತ್ತು ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿದ್ದವು. ಈ ಎರಡೂ ಪ್ರಕರಣಗಳಲ್ಲಿ ಸಿಸೋಡಿಯಾಗೆ ಕೋರ್ಟ್‌ ಜಾಮೀನು ನೀಡಿದೆ.

ಇದೇ ವೇಳೆ ಸುದೀರ್ಘ ಸಮಯದಿಂದ ಜಾಮೀನು ನಿರಾಕರಿಸಿದ ಕೆಳಹಂತದ ನ್ಯಾಯಾಲಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ‘ವಿಚಾರಣೆ ನಡೆಸದೇ ಸುದೀರ್ಘ ಕಾಲ ಸೆರೆವಾಸ ವಿಧಿಸುವ ಮೂಲಕ ಅರ್ಜಿದಾರರಿಗ ತ್ವರಿತ ನ್ಯಾಯದ ಹಕ್ಕನ್ನು ನಿರಾಕರಿಸಲಾಗಿದೆ. ಜಾಮೀನು ನೀಡುವುದು ಕಾನೂನು ಮತ್ತು ಜೈಲಿನಲ್ಲಿ ಇರಿಸುವುದು ಅಪವಾದ ಎನ್ನುವ ತತ್ವಗಳನ್ನು ಇನ್ನಾದರೂ ಹೈಕೋರ್ಟ್‌ ಮತ್ತು ಅಧೀನ ನ್ಯಾಯಾಲಯಗಳು ಕಡ್ಡಾಯವಾಗಿ ಪಾಲಿಸುವ ಸಮಯ ಇದಾಗಿದೆ. ದೋಷಿ ಎಂದು ಘೋಷಿಸುವ ಮುನ್ನವೇ ಸುದೀರ್ಘ ಅವಧಿಗೆ ಬಂಧನದಲ್ಲಿ ಇಡುವುದು ಸರಿಯಲ್ಲ’ ಎಂದು ನ್ಯಾ। ಬಿ.ಆರ್‌ ಗವಾಯಿ ಮತ್ತು ಕೆ.ವಿ. ವಿಶ್ವನಾಥ್‌ ಅವರ ಪೀಠ ಹೇಳಿದೆ.

ಈ ನಡುವೆ ಬಿಡುಗಡೆಯ ಬಳಿಕ ಮಾತನಾಡಿದ ಸಿಸೋಡಿಯಾ, ‘ಸಂವಿಧಾನದ ಶಕ್ತಿಯ ಮೂಲಕ ಈ ಯುದ್ಧವನ್ನು ಅಂತ್ಯಗೊಳಿಸಿದ್ದೇವೆ. ಈ ಸಂದರ್ಭದಲ್ಲಿ ನನ್ನ ಜೊತೆಗಿದ್ದುದಕ್ಕೆ ನಿಮಗೆಲ್ಲ ಧನ್ಯವಾದ’ ಎಂದಿದ್ದಾರೆ.

ಈ ನಡುವೆ ಶುಕ್ರವಾರ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ದೆಹಲಿ ಶಿಕ್ಷಣ ಸಚಿವೆ, ಸಿಸೋಡಿಯಾಗೆ ಜಾಮೀನು ಸಿಕ್ಕ ವಿಷಯ ಕೇಳಿ ಅಲ್ಲೇ ಆನಂದಭಾಷ್ಪ ಸುರಿಸಿದ್ದಾರೆ.