ಪ್ರಣಬ್‌ ಸ್ಮಾರಕ ಪಕ್ಕದಲ್ಲೇ ಮನಮೋಹನ್‌ ಸ್ಮಾರಕ: ಕುಟುಂಬಕ್ಕೆ ಕೇಂದ್ರ ಆಫರ್‌

| Published : Feb 05 2025, 12:32 AM IST

ಪ್ರಣಬ್‌ ಸ್ಮಾರಕ ಪಕ್ಕದಲ್ಲೇ ಮನಮೋಹನ್‌ ಸ್ಮಾರಕ: ಕುಟುಂಬಕ್ಕೆ ಕೇಂದ್ರ ಆಫರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ಡಿಸೆಂಬರ್‌ 26ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ರ ಸ್ಮಾರಕವನ್ನು ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಸ್ಮಾರಕದ ಪಕ್ಕದಲ್ಲೇ ನಿರ್ಮಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ.

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ 26ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ರ ಸ್ಮಾರಕವನ್ನು ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಸ್ಮಾರಕದ ಪಕ್ಕದಲ್ಲೇ ನಿರ್ಮಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಒಂದು ವೇಳೆ ಈ ಪ್ರಸ್ತಾವಕ್ಕೆ ಸಿಂಗ್‌ರ ಕುಟುಂಬ ಒಪ್ಪಿಗೆ ಸೂಚಿಸಿದರೆ ಅದನ್ನು ನಿರ್ಮಿಸುವ ಟ್ರಸ್ಟ್‌ಗೆ ಸರ್ಕಾರ ಭೂಮಿ ಹಸ್ತಾಂತರ ಮಾಡಲಾಗುತ್ತದೆ. ಜೊತೆಗೆ ನಿರ್ಮಾಣ ಸಂಬಂಧಿ ಕಾರ್ಯಗಳಿಗೆ ಟ್ರಸ್ಟ್‌ಗೆ ಸರ್ಕಾರ 25 ಲಕ್ಷ ರು. ನೀಡಲಿದೆ.

==

ಪಾಲಕ್ಕಾಡ್‌ ಮದ್ಯ ಘಟಕಕ್ಕೆ ವಿರೋಧ ಹಿಂದೆ ಕರ್ನಾಟಕ ಲಿಕ್ಕರ್‌ ಲಾಬಿ:ಎಲ್‌ಡಿಎಫ್‌

ಪಾಲಕ್ಕಾಡ್‌: ಪಾಲಕ್ಕಾಡ್‌ನಲ್ಲಿ ಮದ್ಯ ತಯಾರಿಕಾ ಘಟಕ ಸ್ಥಾಪನೆಗೆ ಅನುಮತಿ ನೀಡುವ ವಿಚಾರವಾಗಿ ಕೇರಳದ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವಿನ ಕಿತ್ತಾಟ ಹೊಸ ಸ್ವರೂಪ ಪಡೆದಿದೆ. ಪಾಲಕ್ಕಾಡ್‌ನಲ್ಲಿ ಮದ್ಯ ತಯಾರಿಕಾ ಘಟಕ ಸ್ಥಾಪನೆಗೆ ವ್ಯಕ್ತವಾಗುತ್ತಿರುವ ವಿರೋಧದ ಹಿಂದೆ ಕರ್ನಾಟಕದ ಲಿಕ್ಕರ್‌ ಲಾಬಿಯ ಕೈವಾಡವಿದೆ ಎಂದು ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ಆರೋಪಿಸಿದೆ. ಇಲ್ಲಿ ಘಟಕ ಆರಂಭವಾದರೆ ಕರ್ನಾಟಕ ಲಿಕ್ಕರ್‌ ಮಾರಾಟಕ್ಕೆ ಹೊಡೆತ ಬೀಳಲಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್‌ ಹೇಳಿದ್ದಾರೆ.

==

ಫೋರ್ಬ್ಸ್‌ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಂ.12

ನವದೆಹಲಿ: ಅಮೆರಿಕದ ಪ್ರತಿಷ್ಠಿತ ಬಿಸ್‌ನೆಸ್‌ ಪತ್ರಿಕೆ ಫೋಬ್ಸ್‌ 2025ರ ಬಲಿಷ್ಠ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ 12ನೇ ಸ್ಥಾನ ಪಡೆದಿದೆ.ಆರ್ಥಿಕ ಸ್ಥಿತಿಗತಿ, ಅಂತಾರಾಷ್ಟ್ರೀಯ ಸಂಬಂಧಗಳು, ವ್ಯೂಹಾತ್ಮಕ ಸಂಬಂಧಗಳು, ಸೇನಾ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ತಯಾರಿಸಲಾದ ಈ ಪಟ್ಟಿಯಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕ 2642 ಲಕ್ಷ ಕೋಟಿ ರು. ಜಿಡಿಪಿಯೊಂದಿಗೆ ಮೊದಲ ಸ್ಥಾನ ಪಡೆದಿದೆ. ಉಳಿದಂತೆ ಚೀನಾ, ರಷ್ಯಾ, ಬ್ರಿಟನ್‌, ಜರ್ಮನಿ, ದಕ್ಷಿಣ ಕೊರಿಯಾ, ಫ್ರಾನ್ಸ್‌, ಜಪಾನ್‌, ಸೌದಿ ಹಾಗೂ ಇಸ್ರೇನ್‌ ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷವೂ 12ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿಯೂ ಅದೇ ಸ್ಥಾನ ಕಾಯ್ದುಕೊಂಡಿದ್ದು, ಜಿಡಿಪಿ ರ್‍ಯಾಂಕಿಂಗ್‌ನಲ್ಲಿ ಅಮೆರಿಕ, ಚೀನಾ, ಜರ್ಮನಿ, ಜಪಾನ್‌ಗಳ ಬಳಿಕ 5ನೇ ಸ್ಥಾನ ಪಡೆದಿದೆ.

==

ಬಂಗಾಳವನ್ನು ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಿ: ಟಿಎಂಸಿ ಒತ್ತಾಯ

ಕೋಲ್ಕತಾ: ಪಶ್ಚಿಮ ಬಂಗಾಳವನ್ನು ‘ಬಾಂಗ್ಲಾ’ ಎಂದು ಮರು ನಾಮಕರಣ ಮಾಡಬೇಕು ಎಂದು ತೃಣಮೂಲ ಕಾಂಗ್ರೆಸ್‌ ರಾಜ್ಯಸಭೆಯಲ್ಲಿ ಆಗ್ರಹಿಸಿದೆ. ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಟಿಎಂಸಿ ಎಂಪಿ ರಿತಬ್ರತ ಬ್ಯಾನರ್ಜಿ, ‘2018ರಲ್ಲಿ ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದ ಹೆಸರನ್ನು ಮರುನಾಮಕರಣ ಮಾಡಲು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ’ ಎಂದಿದ್ದಾರೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದು, ‘ಮರುನಾಮಕರಣವು ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಗುರುತಿಗೆ ಹೊಂದಿಕೆಯಾಗುತ್ತದೆ. ಪಶ್ಚಿಮ ಬಂಗಾಳದ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

==

ಕಳೆದ ವರ್ಷ 17600 ಕಂಪನಿಗಳು ಬಂದ್‌, 1.38 ಲಕ್ಷ ನೋಂದಣಿ

ನವದೆಹಲಿ: ಪ್ರಸ್ತಕ ಆರ್ಥಿಕ ವರ್ಷದಲ್ಲಿ ಜ.26ರವರೆಗಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 17,654 ಕಂಪನಿಗಳು ಮುಚ್ಚಲ್ಪಟ್ಟಿವೆ, 1.38 ಲಕ್ಷ ಕಂಪನಿಗಳು ಹೊಸದಾಗಿ ನೋಂದಣಿ ಮಾಡಿಕೊಂಡಿವೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳಿವೆ. ಕಾರ್ಪೋರೇಟ್‌ ವ್ಯವಹಾರಗಳ ಸಚಿವಾಲಯದ ಸಚಿವ ಹರ್ಷ ಮಲ್ಹೋತ್ರಾ ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಮಾಹಿತಿ ನೀಡಿದ್ದು, ಅದರ ಪ್ರಕಾರ, ‘ಪ್ರಸ್ತಕ ಆರ್ಥಿಕ ವರ್ಷದಲ್ಲಿ 17,654 ಕಂಪನಿಗಳು ಮುಚ್ಚಲ್ಪಟ್ಟಿವೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ ಈ ಪ್ರಮಾಣ 22,044. 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಂಪನಿ ಆ್ಯಕ್ಟ್‌ ಪ್ರಕಾರ 1.38 ಲಕ್ಷ ಕಂಪನಿಗಳು ಹೊಸದಾಗಿ ನೋಂದಣಿ ಮಾಡಿಕೊಂಡಿವೆ. ಇದು ಕಳೆದ ವರ್ಷಕ್ಕಿಂತ ಕಡಿಮೆ ಆಗಿದ್ದು, 2034-25ನೇ ಸಾಲಿನಲ್ಲಿ ಈ ಪ್ರಮಾಣ 1.85 ಲಕ್ಷವಿತ್ತು ಎಂದಿದೆ.