ಸಾರಾಂಶ
ನವದೆಹಲಿ: ಭಗವದ್ಗೀತೆಯ ಮತ್ತು ಭರತ ಮುನಿ ರಚಿತ ನಾಟ್ಯಶಾಸ್ತ್ರಗಳ ಹಸ್ತಪ್ರತಿಗಳನ್ನು ಯುನೆಸ್ಕೋದ ವಿಶ್ವ ಸ್ಮರಣೆ ದಾಖಲೆಗೆ ಸೇರಿಸಿಕೊಳ್ಳಲಾಗಿದೆ. ಈ ಮೂಲಕ, ಪುಸ್ತಕ, ಹಸ್ತಪ್ರತಿ, ಫೋಟೋ, ಶಬ್ದ, ವಿಡಿಯೋಗಳನ್ನೊಳಗೊಂಡ ಸಂಗ್ರಹಗಳ ಸಂಖ್ಯೆ 570ಕ್ಕೆ ತಲುಪಿದೆ.
ಏ.17ರಂದು ಆದ ಈ ಸೇರ್ಪಡೆಯ ಬಗ್ಗೆ ಮಾಹಿತಿ ನೀಡಿರುವ ಯುನೆಸ್ಕೋ, ವೈಜ್ಞಾನಿಕ ಕ್ರಾಂತಿ, ಇತಿಹಾಸಕ್ಕೆ ಮಹಿಳೆಯರ ಕೊಡುಗೆ ಮತ್ತು ಬಹುಪಕ್ಷೀಯತೆಯ ಪ್ರಮುಖ ಮೈಲಿಗಲ್ಲುಗಳನ್ನು 72 ದೇಶಗಳು ಮತ್ತು 4 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ. ಗೀತೆ ಹಿಂದೂ ಧರ್ಮಗ್ರಂಥವಾದರೆ, ನಾಟ್ಯಶಾಸ್ತ್ರವನ್ನು ವಿವಿಧ ಪ್ರಕಾರದ ಕಲೆಗಳ ಮೂಲ ಗ್ರಂಥವೆಂದು ಪರಿಗಣಿಸಲಾಗಿದೆ. ಇದರಲ್ಲಿ ಗಂಧರ್ವವೇದ ಎಂದು ಕರೆಯಲ್ಪಡುವ 36,000 ಶ್ಲೋಕಗಳಿವೆ. ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಗೆ ಸಿಕ್ಕಿರುವ ಜಾಗತಿಕ ಮನ್ನಣೆ. ಗೀತೆ ಮತ್ತು ನಾಟ್ಯಶಾಸ್ತ್ರಗಳು ಶತಮಾನಗಳಿಂದ ನಮ್ಮ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿವೆ. ಅವುಗಳ ಒಳನೋಟ ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಇದನ್ನು ‘ಭಾರತದ ನಾಗರಿಕ ಪರಂಪರೆಗೆ ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ್ದಾರೆ ಹಾಗೂ ಎರಡೂ ಗ್ರಂಥಗಳ ಕೆಲ ಚಿತ್ರಗಳ್ನನು ಹಂಚಿಕೊಂಡಿದ್ದಾರೆ.