ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಭ್ರಮ, ಸಡಗರ, ಗೋವಿಂದನ ನಾಮಸ್ಮರಣೆಯೊಂದಿಗೆ ಸಂಪನ್ನ

| N/A | Published : Apr 14 2025, 02:05 AM IST / Updated: Apr 14 2025, 05:35 AM IST

ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಭ್ರಮ, ಸಡಗರ, ಗೋವಿಂದನ ನಾಮಸ್ಮರಣೆಯೊಂದಿಗೆ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವವು ಶನಿವಾರ ತಡರಾತ್ರಿ ಶುರುವಾಗಿ ಭಾನುವಾರ ಬೆಳಗ್ಗೆ 10.30ಕ್ಕೆ ಸಂಭ್ರಮ, ಸಡಗರ, ಗೋವಿಂದನ ನಾಮಸ್ಮರಣೆಯೊಂದಿಗೆ ಕೊನೆಗೊಂಡಿತು.

 ಬೆಂಗಳೂರು : ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವವು ಶನಿವಾರ ತಡರಾತ್ರಿ ಶುರುವಾಗಿ ಭಾನುವಾರ ಬೆಳಗ್ಗೆ 10.30ಕ್ಕೆ ಸಂಭ್ರಮ, ಸಡಗರ, ಗೋವಿಂದನ ನಾಮಸ್ಮರಣೆಯೊಂದಿಗೆ ಕೊನೆಗೊಂಡಿತು.

ಮಳೆಯಿಂದ ಕರಗ ಶಕ್ತ್ಯೋತ್ಸವವು ತಡವಾಗಿ ಆರಂಭಗೊಂಡ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ತಡರಾತ್ರಿ 2.23ಕ್ಕೆ ಅರ್ಚಕ ಎ.ಜ್ಞಾನೇಂದ್ರ ಅವರು ಹೂವಿನ ಕರಗ ಹೊತ್ತು ಹೊರಬರುತ್ತಿದ್ದಂತೆ ಭಕ್ತರು ‘ಗೋವಿಂದ...ಗೋವಿಂದ’ ನಾಮಸ್ಮರಣೆ ಮಾಡುತ್ತ ಭಕ್ತರು ಹೂವಿನ ಮಳೆಗೆರೆದರು.

ಮೊದಲಿಗೆ ದೇವಾಲಯದಿಂದ ಧರ್ಮರಾಯ, ದ್ರೌಪದಿ ದೇವಿ ಸೇರಿ ಉತ್ಸವ ಮೂರ್ತಿಗಳನ್ನು ತಂದು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಧಾರ್ಮಿಕ ವಿಧಾನದೊಂದಿಗೆ ಪೂಜೆ ಸಲ್ಲಿಸುವ ಮೂಲಕ ಅರ್ಚಕ ಜ್ಞಾನೇಂದ್ರ ಕರಗ ಹೊತ್ತು ನಗರ ಪ್ರದಕ್ಷಿಣೆಗೆ ಹೊರಟರು. ಈ ವೇಳೆ ಸಾವಿರಾರು ವೀರಕುಮಾರರು ಕೈಯಲ್ಲಿ ಖಡ್ಗ ಹಿಡಿದು ಕರಗ ರಕ್ಷಣೆ ಮಾಡುತ್ತ ಸಾಗಿದರು.

ದೇವಸ್ಥಾನದ ಸುತ್ತಲಿನ ಬೀದಿ ಸೇರಿದಂತೆ ಕರಗ ಸಾಗಿದ ಮಾರ್ಗಗಳಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ದೇವಸ್ಥಾನದ ಮುಖ್ಯರಸ್ತೆಯಿಂದ ಹೊರಟ ಮಲ್ಲಿಗೆ ಕಂಪಿನ ಹೂವಿನ ಕರಗ ಸುತ್ತಲಿನ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸುತ್ತ ಮುಂಜಾನೆವರೆಗೆ ಗಾಣಿಗರಪೇಟೆ, ನಗರ್ತಪೇಟೆ, ಉಪ್ಪಾರಪೇಟೆ, ಅಕ್ಕಿಪೇಟೆ, ಮಾಮೂಲ್‌ಪೇಟೆ, ತಿಗಳರ ಪೇಟೆ ಮಾರ್ಗವಾಗಿ ಸಾಗಿ ಭಾವೈಕ್ಯದ ಸಂಗಮವಾಗಿ ಅರಳೇಪೇಟೆಯ ತವಕಲ್ ಮಸ್ತಾನ್ ಸಾಹೇಬ್ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು.

ಅಲ್ಲಿಂದ ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ಮಾರ್ಗದಲ್ಲಿ ಸಾಗಿತು ದೇವಸ್ಥಾನಗಳು ಹಾಗೂ ಕುಲಬಾಂಧವರ ಮನೆಯಲ್ಲಿ ಪೂಜೆ ಸ್ವೀಕರಿಸುತ್ತ ಸುಮಾರು 20 ಕಿ.ಮೀ.ಗೂ ಅಧಿಕ ದೂರದವರೆಗೆ ಸಂಚರಿಸಿದ ಕರಗ ಅಂತಿಮವಾಗಿ ಧರ್ಮರಾಯಸ್ವಾಮಿ ದೇವಸ್ಥಾನ ತಲುಪಿ 11 ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ದೇವಾಲಯ ಸೇರಿತು.

ಕರಗ ಸಂಭ್ರಮಕ್ಕೆ ಇಂದು ತೆರೆ:

ಕರಗ ಶಕ್ತ್ಯೋತ್ಸವ ದೇವಾಲಯ ಸೇರಿದ ಬಳಿಕ ಭಾನುವಾರ ವಿವಿಧ ಧಾರ್ಮಿಕ ಆಚರಣೆಗಳ ಜತೆಗೆ ‘ಭಾರತ ಕಥಾ ಪ್ರವಚನ’ವೂ ನಡೆದ ನಂತರ ಶಕ್ತಿ ಸ್ಥಳದ ಸುತ್ತ ಎಂಟು ದಿಕ್ಕಿಗೂ ಗಾವು ಶಾಂತಿ ಮಾಡಲಾಯಿತು. ಸೋಮವಾರ ವಸಂತೋತ್ಸವದೊಂದಿಗೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

ಸಮಿತಿ ಅಧಿಕಾರಾವಧಿ ಪೂರ್ಣ:

ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧಿಕಾರವಧಿ ಕಳೆದ ಮಾರ್ಚ್‌ನಲ್ಲಿಯೇ ಪೂರ್ಣಗೊಂಡಿದೆ. ಸಮಿತಿಯ ಸದಸ್ಯರು ಮುಂದಿನ ಮೂರು ವರ್ಷಕ್ಕೆ ಸಮಿತಿಯ ಅಧಿಕಾವಧಿ ವಿಸ್ತರಣೆ ಮಾಡುವಂತೆ ನ್ಯಾಯಾಲಯಕ್ಕೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕರಗ ಉತ್ಸವ ಪೂರ್ಣಗೊಳ್ಳುವವರೆಗೆ ಮುಂದುವರೆಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ, ವ್ಯವಸ್ಥಾಪನಾ ಸಮಿತಿಯ ಅಧಿಕಾರಿ ಸೋಮವಾರಕ್ಕೆ ಮುಕ್ತಾಯವಾಗಲಿದೆ. ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯ ರಚನೆಗೆ ಜಿಲ್ಲಾಧಿಕಾರಿಗಳು ಅರ್ಜಿ ಆಹ್ವಾನಿಸಿ ನೇಮಕ ಮಾಡಲಿದ್ದಾರೆ. ಅಲ್ಲಿಯವರೆಗೆ ಮುಜುರಾಯಿ ಇಲಾಖೆಯಿಂದ ನೇಮಕಗೊಂಡ ಅಧಿಕಾರಿಯು ಆಡಳಿತಾಧಿಕಾರಿಯಾಗಿರಲಿದ್ದಾರೆ.