ಸಾರಾಂಶ
ರಾಂಚಿ: ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಸಿಂಗ್‌ಭೂಮ್ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಕೈಗೊಂಡಿದೆ. ಇದಕ್ಕಾಗಿ ಹೆಲಿಕಾಪ್ಟರ್ ಮೂಲಕ ಚುನಾವಣಾ ಸಿಬ್ಬಂದಿ, ಮತಯಂತ್ರ ಹಾಗೂ ಸಲಕರಣೆಗಳನ್ನು ಮತಕೇಂದ್ರಗಳಿಗೆ ಕಳಿಸಲು ಆಯೋಗ ತೀರ್ಮಾನಿಸಿದೆ.
ಸಿಂಗ್‌ಭೂಮ್ ಜಿಲ್ಲೆಯು ಅತಿ ಹೆಚ್ಚು ನಕ್ಸಲರನ್ನು ಹೊಂದಿರುವ ಜಿಲ್ಲೆಯಾಗಿದ್ದು, ಕಳೆದ ಒಂದು ವರ್ಷದಲ್ಲಿ 46 ಉಗ್ರ ಘಟನೆಗಳು ನಡೆದಿವೆ. ಇದರಿಂದಾಗಿ ಒಂದೇ ವರ್ಷದಲ್ಲಿ 22 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಜಿಲ್ಲೆಯ ಕೆಲವು ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಎರಡು ದಶಕಗಳಿಂದ ಮತದಾನವೇ ನಡೆದಿಲ್ಲ. ಈ ಕಾರಣವಾಗಿ ಈ ಬಾರಿ ಯಾವುದೇ ವ್ಯಕ್ತಿಯೂ ಮತದಾನದಿಂದ ವಂಚಿತನಾಗಬಾರದೆಂಬ ಕಾರಣಕ್ಕೆ ಚುನಾವಣಾ ಆಯೋಗ ಈ ಕ್ರಮ ತೆಗೆದುಕೊಂಡಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಕುಲ್ದೀಪ್ ಚೌಧರಿ,‘ಸಿಂಗ್‌ಭೂಮ್ ಜಿಲ್ಲೆಯ ರೋಬೋಕೆರಾ, ಬಿಂಜ್, ತಲ್ಕೋಬಾದ್, ಜರೈಕೆಲಾ, ರೋಂ, ರೆಂಗ್ರಾಹಟು ಮುಂತಾದ ಸ್ಥಳಗಳ 118 ಮತಗಟ್ಟೆ ತೆರೆಯಲಿದ್ದೇವೆ. ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ವಯಸ್ಸಿನ 62 ಮತದಾರರಿದ್ದು, 3909 ಮತದಾರರು 85 ವಯಸ್ಸು ದಾಟಿದ್ದಾರೆ. 13,703 ಅಂಗವಿಕಲರಿದ್ದಾರೆ. ಇವರೆಲ್ಲರಿಗೂ ಮತದಾನ ಅವಕಾಶ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.