ಕದನವಿರಾಮಕ್ಕೆ ನಕ್ಸಲರ ಮನವಿ

| Published : Sep 18 2025, 01:12 AM IST

ಸಾರಾಂಶ

ನಕ್ಸಲ್‌ ಮುಕ್ತ ದೇಶ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಅಭಿಯಾನ ನಡೆಸುತ್ತಿರುವ ಹೊತ್ತಿನಲ್ಲೇ ಛತ್ತೀಸ್‌ಗಢದಲ್ಲಿ ಸಕ್ರಿಯಯಾಗಿರುವ ನಕ್ಸಲರು ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎನ್ನಲಾದ ಘಟನೆಯೊಂದು ನಡೆದಿದೆ.

ಸಶಸ್ತ್ರ ಹೋರಾಟ ನಿಲ್ಲಿಸಿ, ಶಾಂತಿ ಮಾತುಕತೆಗೆ ನಿರ್ಧಾರ

ರಾಯ್ಪುರ: ನಕ್ಸಲ್‌ ಮುಕ್ತ ದೇಶ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಅಭಿಯಾನ ನಡೆಸುತ್ತಿರುವ ಹೊತ್ತಿನಲ್ಲೇ ಛತ್ತೀಸ್‌ಗಢದಲ್ಲಿ ಸಕ್ರಿಯಯಾಗಿರುವ ನಕ್ಸಲರು ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎನ್ನಲಾದ ಘಟನೆಯೊಂದು ನಡೆದಿದೆ.

ರಾಜ್ಯದಲ್ಲಿ ತಾವು ತಾತ್ಕಾಲಿಕವಾಗಿ ಸಶಸ್ತ್ರ ಹೋರಾಟ ಸ್ಥಗಿತಗೊಳಿಸಿದ್ದು, ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ಇಚ್ಚಿಸಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಾ ಕದನವಿರಾಮ ಘೋಷಿಸಬೇಕು ಎಂದು ನಕ್ಸಲ್‌ ಅಭಯ್‌ ಹೆಸರಿನಲ್ಲಿ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಲಾಗಿದೆ.

ಈ ನಡುವೆ ಪತ್ರದ ಸತ್ಯಾಸತ್ಯತೆ ಬಗ್ಗೆ ನಮಗೆ ಇನ್ನೂ ಖಚಿತವಾಗಿಲ್ಲ. ಅದು ಖಚಿತವಾದ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸಕ್ತ ದೇಶದಲ್ಲೇ ಅತಿ ಹೆಚ್ಚು ನಕ್ಸಲ್‌ ಚಟುವಟಿಕೆ ಹೊಂದಿರುವ ಛತ್ತೀಸ್‌ಗಢದಲ್ಲಿ ನಕ್ಸಲ್‌ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರೀ ಕಾರ್ಯಾಚರಣೆ ಕೈಗೊಂಡಿವೆ. ಪರಿಣಾಮ ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯವೊಂದಲ್ಲೇ 380 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದು, 1200ಕ್ಕೂ ಹೆಚ್ಚು ನಕ್ಸಲರನ್ನು ಬಂಧಿಸಲಾಗಿದೆ. 1000ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ. ಸಂಘಟನೆಯ ಬಹುತೇಕ ನಾಯಕರು ಸಾವನ್ನಪ್ಪಿದ್ದು, ಅವರ ಆರ್ಥಿಕ ಸಂಪನ್ಮೂಲ ಬತ್ತಿಹೋಗಿದೆ. ಜೊತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕಾರಣ ಜನಬೆಂಬಲ ಕೂಡಾ ನಿಂತು ಹೋಗಿದೆ. ಹೀಗಾಗಿ ನಕ್ಸಲರು ಹೋರಾಟ ತ್ಯಜಿಸಿ ಶಾಂತಿಯತ್ತ ಮುಖ ಮಾಡಿಬಹುದು ಎನ್ನಲಾಗಿದೆ.