ಹಿಂದು- ಮುಸ್ಲಿಂ ವಿವಾಹ, ಮುಸ್ಲಿಂ ಕಾನೂನಿನಡಿ ಅಸಿಂಧು: ಕೋರ್ಟ್‌

| Published : May 31 2024, 02:15 AM IST / Updated: May 31 2024, 04:21 AM IST

ಹಿಂದು- ಮುಸ್ಲಿಂ ವಿವಾಹ, ಮುಸ್ಲಿಂ ಕಾನೂನಿನಡಿ ಅಸಿಂಧು: ಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆಯ ನಡುವಣ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಸಿಂಧು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಭೋಪಾಲ್‌: ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆಯ ನಡುವಣ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಸಿಂಧು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಮುಸ್ಲಿಂ ಪುರುಷ-ಹಿಂದು ಮಹಿಳೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಮಾಡಿಕೊಡಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅದನ್ನು ಕ್ರಮಬದ್ಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾ। ಗುರುಪಾಲ್‌ ಸಿಂಗ್‌ ಅಹ್ಲುವಾಲಿಯಾ ಅವರಿದ್ದ ಪೀಠ ಹೇಳಿದೆ.

ಮಹಮದೀಯ ಕಾನೂನಿನ ಪ್ರಕಾರ, ಮೂರ್ತಿ ಪೂಜಕ ಅಥವಾ ಅಗ್ನಿ ಆರಾಧನೆ ಮಾಡುವ ಯುವತಿಯ ಜತೆ ಮುಸ್ಲಿಂ ಯುವಕನ ವಿವಾಹ ಅಸಿಂಧುವಾಗುತ್ತದೆ. ವಿಶೇಷ ವಿವಾಹ ಕಾಯ್ದೆಯಡಿ ಅಂತಹ ವಿವಾಹ ನೋಂದಣಿಯಾದರೂ ಅದು ಕ್ರಮಬದ್ಧ ವಿವಾಹ ಎನಿಸಿಕೊಳ್ಳುವುದಿಲ್ಲ ಎಂದು ಮೇ 27ರಂದು ಪ್ರಕರಣವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಡಿ ನಿರ್ಬಂಧವಿರುವ ವಿವಾಹಗಳು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದಾಕ್ಷಣ ಕಾನೂನುಬದ್ಧವಾಗುವುದಿಲ್ಲ. ನಿರ್ಬಂಧಿತವಲ್ಲದ ಸಂಬಂಧ ಹೊಂದಿರುವವರು ಮಾತ್ರವೇ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಮುಸ್ಲಿಂ ಪುರುಷ ಹಾಗೂ ಹಿಂದು ಯುವತಿ ಇಬ್ಬರೂ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ ಇಬ್ಬರೂ ಧರ್ಮವನ್ನು ಬದಲಿಸಿಕೊಳ್ಳುವುದಿಲ್ಲ. ವಿವಾಹ ನೋಂದಣಿಗೆ ಹಾಜರಾದಾಗ ಅವರಿಗೆ ರಕ್ಷಣೆ ನೀಡಬೇಕು ಎಂದು ವಕೀಲರು ಕೋರಿದ್ದರು. ಆದರೆ ಪೊಲೀಸ್‌ ಭದ್ರತೆ ನೀಡಲು ಕೋರ್ಟ್‌ ನಿರಾಕರಿಸಿತು.