ಇಡೀ ದೇಶವೇ ನನ್ನ ಕುಟುಂಬ: ನರೇಂದ್ರ ಮೋದಿ

| Published : Mar 05 2024, 01:34 AM IST / Updated: Mar 05 2024, 11:04 AM IST

Narendra-Modi

ಸಾರಾಂಶ

2024ರ ಲೋಕಸಭೆ ಚುನಾವಣೆ ಸಮೀಪಿಸಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬದ ಬಗ್ಗೆ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಹೇಳಿಕೆಗಳ ರಾಜಕೀಯ ಸಮರ ಆರಂಭವಾಗಿದೆ.

ಪಿಟಿಐ ಆದಿಲಾಬಾದ್‌/ಪಟನಾ

2024ರ ಲೋಕಸಭೆ ಚುನಾವಣೆ ಸಮೀಪಿಸಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬದ ಬಗ್ಗೆ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಹೇಳಿಕೆಗಳ ರಾಜಕೀಯ ಸಮರ ಆರಂಭವಾಗಿದೆ. 

‘ಮೋದಿಗೆ ಕುಟುಂಬವೇ ಇಲ್ಲ’ ಎಂದು ಆರ್‌ಜೆಡಿ ನಾಯಕ ಲಾಲು ಯಾದವ್‌ ಅವರು ಕೆಣಕಿ ಮಾತನಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮೋದಿ ‘ಇಡೀ ದೇಶವೇ ನನ್ನ ಕುಟುಂಬ’ ಎಂದು ತಿರುಗೇಟು ನೀಡಿದ್ದಾರೆ.

ಪಟನಾದಲ್ಲಿ ಭಾನುವಾರ ಮಾತನಾಡಿದ ಲಾಲು ಅವರು ಕುಟುಂಬ ರಾಜಕೀಯದ ಬಗ್ಗೆ ಮೋದಿ ಆಡಿದ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.

‘ನರೇಂದ್ರ ಮೋದಿ ಅವರ ಸ್ವಂತ ಕುಟುಂಬವನ್ನು ಹೊಂದಿಲ್ಲದಿದ್ದರೆ ನಾವು ಏನು ಮಾಡೋಕಾಗುತ್ತೆ? ರಾಮಮಂದಿರದ ಬಗ್ಗೆ ಮೋದಿ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. 

ಆತ ನಿಜವಾದ ಹಿಂದು ಅಲ್ಲ. ಹಿಂದು ಸಂಪ್ರದಾಯದಲ್ಲಿ, ಮಗನು ತನ್ನ ಹೆತ್ತವರ ಮರಣದ ನಂತರ ತನ್ನ ತಲೆ ಮತ್ತು ಗಡ್ಡವನ್ನು ಬೋಳಿಸಿಕೊಳ್ಳಬೇಕು. ಆದರೆ ತಾಯಿ ಸತ್ತಾಗ ಮೋದಿ ಹಾಗೆ ಮಾಡಲಿಲ್ಲ’ ಎಂದು ಕಿಡಿಕಾರಿದ್ದರು.

ಮೋದಿ ತಿರುಗೇಟು: ಇದಕ್ಕೆ ತೆಲಂಗಾಣದ ಆದಿಲಾಬಾದ್‌ನಲ್ಲಿ ಸೋಮವಾರ ತಿರುಗೇಟು ನೀಡಿದ ಮೋದಿ, ‘ಜನರ ಸೇವೆ ಮಾಡುವ ಕನಸಿನೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ತೊರೆದಿದ್ದೇನೆ. 

ನಾನೊಬ್ಬ ಜನಸೇವಕ. ಸಾರ್ವಜನಿಕ ಕಲ್ಯಾಣಕ್ಕಾಗಿ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೇನೆ. ಈ ದೇಶದ 140 ಕೋಟಿ ಜನರು ನನ್ನ ಕುಟುಂಬ. ಮೇರಾ 

ಭಾರತ್ ಮೇರಾ ಪರಿವಾರ ಹೈ (ನನ್ನ ಭಾರತ ನನ್ನ ಕುಟುಂಬ). ನನ್ನ ಬದುಕು ತೆರೆದ ಪುಸ್ತಕವಿದ್ದಂತೆ. ದೇಶದ ಜನರಿಗೆ ಇದರ ಬಗ್ಗೆ ತಿಳಿದಿದೆ. ನನ್ನ ಬಾಲ್ಯದಲ್ಲಿ ನಾನು ಮನೆಯಿಂದ ಹೊರಬಂದಾಗ, ನಾನು ದೇಶವಾಸಿಗಳಿಗಾಗಿ ಬದುಕುತ್ತೇನೆ ಎಂದು ಕನಸು ಕಂಡಿದ್ದೆ’ ಎಂದರು.

ಅಲ್ಲದೆ, ದೇಶದಲ್ಲಿನ ‘ರಾಜವಂಶಜ ಪಕ್ಷಗಳು’ ವಿಭಿನ್ನ ಮುಖಗಳನ್ನು ಹೊಂದಿರಬಹುದು, ಆದರೆ ‘ಸುಳ್ಳು ಮತ್ತು ಲೂಟಿ’ (ಝೂಟ್‌ ಔರ್‌ ಲೂಟ್) ಅವರ ಸಾಮಾನ್ಯ ಸ್ವಭಾವ’ ಎಂದು ಕಿಡಿಕಾರಿದರು.