ಭಾರತದ ಪ್ರಸಿದ್ಧ ವರ್ಣಚಿತ್ರಕಾರ ದಿ.ಎಂ.ಎಫ್. ಹುಸೇನ್ ಅವರ ವರ್ಣಚಿತ್ರ ದಾಖಲೆಯ ₹119 ಕೋಟಿಗೆ ಸೇಲ್‌

| N/A | Published : Mar 22 2025, 02:00 AM IST / Updated: Mar 22 2025, 04:57 AM IST

ಸಾರಾಂಶ

ಭಾರತದ ಪ್ರಸಿದ್ಧ ವರ್ಣಚಿತ್ರಕಾರ ದಿ.ಎಂ.ಎಫ್. ಹುಸೇನ್ ಅವರ ‘ಗ್ರಾಮಯಾತ್ರಾ’ ವರ್ಣಚಿತ್ರ ನ್ಯೂಯಾರ್ಕ್‌ನ ಇಂಡಿಯನ್ ಮಾಡ್ರನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಹರಾಜಿನಲ್ಲಿ 118.7 ಕೋಟಿ ರು.ಗಳಿಗೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.

ನ್ಯೂಯಾರ್ಕ್ : ಭಾರತದ ಪ್ರಸಿದ್ಧ ವರ್ಣಚಿತ್ರಕಾರ ದಿ.ಎಂ.ಎಫ್. ಹುಸೇನ್ ಅವರ ‘ಗ್ರಾಮಯಾತ್ರಾ’ ವರ್ಣಚಿತ್ರ ನ್ಯೂಯಾರ್ಕ್‌ನ ಇಂಡಿಯನ್ ಮಾಡ್ರನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಹರಾಜಿನಲ್ಲಿ 118.7 ಕೋಟಿ ರು.ಗಳಿಗೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ. 

ಮಾ.19ರಂದು ಕ್ರಿಸ್ಟೀಸ್ ಹರಾಜಿನಲ್ಲಿ ನಡೆದ ಈ ಮಾರಾಟವು ಇದುವರೆಗಿನ ಹರಾಜಿನಲ್ಲಿ ಭಾರತೀಯ ಕಲಾವಿದರೊಬ್ಬರು ಪಡೆದ ಅತ್ಯಧಿಕ ಬೆಲೆಯಾಗಿದೆ. ಹಿಂದಿನ ದಾಖಲೆಯನ್ನು ಹೊಂದಿರುವ ಅಮೃತಾ ಶೇರ್ಗಿಲ್ ಅವರ 1937ರ ‘ದಿ ಸ್ಟೋರಿ ಟೆಲ್ಲರ್’ ಚಿತ್ರದ ಬೆಲೆ (61.8 ಕೋಟಿ ರು.)ಯನ್ನು ಇದು ಮೀರಿಸಿದೆ. ಈ ಹಿಂದೆ, ಹುಸೇನ್ ಅವರ ಅತ್ಯಂತ ದುಬಾರಿ ವರ್ಣಚಿತ್ರ ‘ಪುನರ್ಜನ್ಮ’ ಕಳೆದ ವರ್ಷ ಲಂಡನ್‌ನಲ್ಲಿ 25.7 ಕೋಟಿ ರು.ಗೆ ಮಾರಾಟವಾಗಿತ್ತು.

ಪಾಕ್‌ ದೂತಾವಾಸದ ಇಫ್ತಾರ್‌ ಪಾರ್ಟಿಗೆ ಅಯ್ಯರ್‌: ವಿವಾದ

ನವದೆಹಲಿ: ಪಾಕಿಸ್ತಾನದ ಪರ ಸದಾ ಮೃಧು ಧೋರಣೆ ತೋರುವ ಹಿರಿಯ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಮತ್ತೆ ತಮ್ಮ ಪಾಕ್‌ ಪ್ರೀತಿ ಪ್ರದರ್ಶಿಸಿದ್ದಾರೆ. ನವದೆಹಲಿಯಲ್ಲಿ ಪಾಕಿಸ್ತಾನದ ದೂತಾವಾಸ ಕಚೇರಿ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ಅಯ್ಯರ್‌ ಭಾಗಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ದಿನ ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಯ್ಯರ್‌ ಭಾಗವಹಿಸುವಿಕೆಯನ್ನು ಟೀಕಿಸಿರುವ ಬಿಜೆಪಿ, ಕಾಂಗ್ರೆಸ್‌ ಎಂದರೆ ‘ಪಾಕಿಸ್ತಾನ ಸ್ನೇಹಿ ಪಕ್ಷ(ಪಿಪಿಪಿ)’ ಎಂದು ಕರೆದಿದೆ. ಶೆಹಜಾದ್‌ ಪೂನಾವಾಲ ಮಾತನಾಡಿ, ‘ಮೋದಿಯವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ ದೇಶ ವಿರೋಧಿ ಕೆಲಸ ಮಾಡುತ್ತಿದೆ’ ಎಂದು ಆಪಾದಿಸಿದ್ದಾರೆ. ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ, ‘ಅಯ್ಯರ್‌ ಅಥವಾ ಯಾವುದೇ ಕಾಂಗ್ರೆಸ್‌ ನಾಯಕರಿರಲಿ, ಅವರ ಮನಸ್ಸಲ್ಲಿ ಪಾಕ್‌ ಪ್ರೀತಿ ಇರುತ್ತದೆ’ ಎಂದು ಟೀಕಿಸಿದ್ದಾರೆ.

ಆಪ್ ನಾಯಕತ್ವಕ್ಕೆ ಸರ್ಜರಿ : ದಿಲ್ಲಿಗೆ ಸೌರಭ್, ಪಂಜಾಬ್ಗೆ ಸಿಸೋಡಿಯಾ ಉಸ್ತುವಾರಿ

ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಆಮ್ ಆದ್ಮಿ ಪಕ್ಷ ತನ್ನ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮಾಜಿ ಸಚಿವ ಸೌರಭ್ ಭಾರದ್ವಾಜ್ ಅವರನ್ನು ದೆಹಲಿ ಘಟಕದ ಹೊಸ ಅಧ್ಯಕ್ಷರನ್ನಾಗಿ ಮತ್ತು ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಪಂಜಾಬ್‌ನ ಉಸ್ತುವಾರಿಯನ್ನಾಗಿ ನೇಮಿಸಿದೆ.ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್ ಅವರನ್ನು ಛತ್ತೀಸ್‌ಗಢ ಘಟಕದ ಉಸ್ತುವಾರಿಯಾಗಿ, ಗೋಪಾಲ್ ರೈ ಅವರನ್ನು ಗುಜರಾತ್ ಉಸ್ತುವಾರಿಯಾಗಿ, ಪಂಕಜ್ ಗುಪ್ತಾ ಅವರನ್ನು ಗೋವಾ ಘಟಕದ ಮುಖ್ಯಸ್ಥರನ್ನಾಗಿ ಹಾಗೂ ಮೆಹ್ರಾಜ್ ಮಲಿಕ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಬೆಂಕಿ ಅವಘಢ : ಲಂಡನ್‌ ಹೀಥ್ರೂ ಏರ್‌ಪೋರ್ಟ್‌ ದಿನವಿಡೀ ಬಂದ್‌

ನವದೆಹಲಿ/ ಲಂಡನ್: ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದ ಉಪಕೇಂದ್ರದಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಶುಕ್ರವಾರವಿಡಿ ವಿಮಾನ ನಿಲ್ದಾಣವನ್ನು ಬಂದ್‌ ಮಾಡಲಾಗಿತ್ತು. ಹೀಗಾಗಿ ಏರಿಂಡಿಯಾ ಸೇರಿದಂತೆ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿತು.ಹೀಥ್ರೂ ವಿಮಾನ ನಿಲ್ದಾಣದ ಉಪಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ವಿಮಾನ ನಿಲ್ದಾಣ ಬಂದ್‌ ಮಾಡಲಾಗಿತ್ತು. ಇದರಿಂದ 1350 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಯಿತು.

ವಿಮಾನ ನಿಲ್ದಾಣ ಬಂದ್‌ ಆಗಿರುವ ಪರಿಣಾಮ ಭಾರತದ ವಿಮಾನಯಾನ ಸಂಸ್ಥೆ ಏರಿಂಡಿಯಾಗೂ ತಟ್ಟಿದ್ದು, ಹಲವುವಿಮಾನಗಳು ರದ್ದಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏರಿಂಡಿಯಾ ಸಂಸ್ಥೆ, ‘ಮುಂಬೈನಿಂದ ಲಂಡನ್‌ ಹೀಥ್ರೂಗೆ ಹೊರಟ ಒಂದು ವಿಮಾನ ಹಿಂತಿರುಗಿದೆ. ದೆಹಲಿಯಿಂದ ಹೊರಡುವ ಒಂದು ವಿಮಾನ ಫ್ರಾಂಕ್‌ಫರ್ಟ್‌ಗೆ ತಿರುಗುತ್ತಿದೆ, ಉಳಿದಿಂತೆ ಲಂಡನ್‌ನ ಹೀಥ್ರೂಗೆ ಮತ್ತು ಅಲ್ಲಿಂದ ಹೊರಡುವ ಉಳಿದ ಎಲ್ಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ’ ಎಂದಿದೆ.

ಇನ್ನು ವಿದ್ಯುತ್‌ ಕೇಂದ್ರದಲ್ಲಿ ಉಂಟಾದ ಬೆಂಕಿ ಅವಘಡದಿಂದ ಹೀಥ್ರೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸುಮಾರು 16300ಕ್ಕೂ ಹೆಚ್ಚಿನ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು.