ಪಾಕ್‌ ಸೇನಾ ಹೆಡ್‌ಆಫೀಸ್‌ಗೇ ಭಾರತದ ಸೇನೆ ರುಚಿ : ಸಿಂಗ್‌

| N/A | Published : May 11 2025, 11:57 PM IST / Updated: May 12 2025, 04:49 AM IST

ಸಾರಾಂಶ

ಗಡಿಯಲ್ಲಿರುವ ಸೇನಾ ನೆಲಗಳಷ್ಟೇ ಅಲ್ಲ, ಉಗ್ರ ಪೋಷಕ ಪಾಕಿಸ್ತಾನ ಸೇನೆಯ ಮುಖ್ಯ ಕಚೇರಿ ಇರುವ ರಾವಲ್ಪಿಂಡಿಯ ಮೇಲೂ ನುಗ್ಗಿ ಹೊಡೆಯುವ ಮೂಲಕ ಭಾರತ ತನ್ನ ಸೇನಾ ಸಾಮರ್ಥ್ಯ ತೋರಿಸಿಕೊಟ್ಟಿದೆ.  

ನವದೆಹಲಿ: ಗಡಿಯಲ್ಲಿರುವ ಸೇನಾ ನೆಲಗಳಷ್ಟೇ ಅಲ್ಲ, ಉಗ್ರ ಪೋಷಕ ಪಾಕಿಸ್ತಾನ ಸೇನೆಯ ಮುಖ್ಯ ಕಚೇರಿ ಇರುವ ರಾವಲ್ಪಿಂಡಿಯ ಮೇಲೂ ನುಗ್ಗಿ ಹೊಡೆಯುವ ಮೂಲಕ ಭಾರತ ತನ್ನ ಸೇನಾ ಸಾಮರ್ಥ್ಯ ತೋರಿಸಿಕೊಟ್ಟಿದೆ.

 ಈ ಮೂಲಕ ಪಹಲ್ಗಾಂ ದಾಳಿಯಲ್ಲಿ ತಮ್ಮ ಮಹಿಳೆಯರ ಸಿಂದೂರ ಅಳಿಸಿದ್ದಕ್ಕೆ ತಕ್ಕ ಪ್ರತೀಕಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹೇಳಿದ್ದಾರೆ.

ಲಖನೌದಲ್ಲಿ ನಿರ್ಮಾಣವಾಗಿರುವ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನಾ ಘಟಕವನ್ನು ವರ್ಚುವಲ್‌ ಆಗಿ ಉದ್ಘಾಟಿಸಿ ಮಾತನಾಡಿದ ಸಿಂಗ್‌, ಆಪರೇಷನ್‌ ಸಿಂದೂರ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಆಪರೇಷನ್‌ ಸಿಂದೂರ ಕೇವಲ ಒಂದು ಸೇನಾ ಕಾರ್ಯಾಚರಣೆ ಅಷ್ಟೇ ಆಗಿರಲಿಲ್ಲ, ಉಗ್ರವಾದದ ವಿರುದ್ಧದ ಭಾರತದ ರಾಜಕೀಯ, ಸಾಮಾಜಿಕ ಮತ್ತು ವ್ಯೂಹಾತ್ಮಕ ಸಂಕಲ್ಪದ ಪ್ರತೀಕವಾಗಿತ್ತು. ಭಾರತ ವಿರೋಧಿಗಳು ಮತ್ತು ಉಗ್ರ ಸಂಘಟನೆಗಳು ಭಾರತ ಮಾತೆಯ ಮುಕುಟಮಣಿ ಕಾಶ್ಮೀರದ ಮೇಲೆ ದಾಳಿ ನಡೆಸಿದ್ದಷ್ಟೇ ಅಲ್ಲದೆ, ಹಲವು ಕುಟುಂಬಗಳ ಸಿಂದೂರವನ್ನೂ ಅಳಿಸಿ ಹಾಕಿದ್ದರು. ಆಪರೇಷನ್‌ ಸಿಂದೂರದ ಮೂಲಕ ಭಾರತೀಯ ಸೇನೆ ಅದಕ್ಕೆ ಪ್ರತೀಕಾರ ತೀರಿಸಿಕೊಂಡಿದೆ ಎಂದರು.

ಮೇ7ರಂದು ಆರಂಭಿಸಲಾದ ಆಪರೇಷನ್ ಸಿಂದೂರದ ಮೂಲಕ 9 ಉಗ್ರ ನೆಲೆಗಳನ್ನು ನಾಶ ಮಾಡಲಾಗಿತ್ತು. ಆ ಬಳಿಕ ಪಾಕಿಸ್ತಾನದ ಎಲ್ಲಾ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದರು. ಇದೇ ವೇಳೆ ಅ‍ವರು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸಿಗಾಗಿ ಭಾರತೀಯ ಸೇನೆಗೆ ಅಭಿನಂದನೆಯನ್ನೂ ಸಲ್ಲಿಸಿದರು.

ಈ ಕಾರ್ಯಾಚರಣೆ ಉಗ್ರವಾದದ ವಿರುದ್ಧ ಭಾರತದ ಬಲಿಷ್ಠ ಸಂಕಲ್ಪವನ್ನು ತೋರಿಸಿದ್ದಷ್ಟೇ ಅಲ್ಲದೆ, ದೇಶದ ಮಿಲಿಟರಿ ಸಾಮರ್ಥ್ಯವನ್ನೂ ಜಗತ್ತಿಗೆ ತೋರಿಸಿಕೊಟ್ಟಿತು. ಭಯೋತ್ಪಾದನೆ ವಿರುದ್ಧ ಭಾರತವು ಯಾವುದೇ ಕ್ರಮಕ್ಕಿಳಿದರೆ ಗಡಿಯಾಚೆಗಿನ ಪ್ರದೇಶವೂ ಉಗ್ರರಿಗೆ ಸುರಕ್ಷಿತವಲ್ಲ ಎಂಬುದನ್ನು ಭಯೋತ್ಪಾದಕರು ಮತ್ತು ಅವರ ಪೋಷಕರಿಗೆ ತೋರಿಸಿಕೊಟ್ಟಿದ್ದೇವೆ. ಪಾಕ್‌ನಲ್ಲಿರುವ ಉಗ್ರರ ನೆಲೆ ನಾಶ ಮಾಡುವ ಗುರಿಯೊಂದಿಗೆ ಆಪರೇಷನ್ ಸಿಂದೂರ ಆರಂಭಿಸಲಾಗಿತ್ತು. ನಾವು ಯಾವತ್ತೂ ಪಾಕಿಸ್ತಾನದ ನಾಗರಿಕರನ್ನು ಗುರಿ ಮಾಡಲಿಲ್ಲ. ಆದರೆ ಪಾಕಿಸ್ತಾನವು ನಮ್ಮ ಜನವಸತಿ ಪ್ರದೇಶ ಮಾತ್ರವಲ್ಲದೆ ದೇವಸ್ಥಾನ, ಗುರುದ್ವಾರ ಮತ್ತು ಚರ್ಚ್‌ಗಳನ್ನೂ ಗುರಿಯಾಗಿಸಿ ದಾಳಿ ನಡೆಸಿತು ಎಂದರು.

ಪ್ರಧಾನಿ ಮೋದಿ ಅವರು ನವಭಾರತವು ದೇಶದೊಳಗೆ ಮತ್ತು ಗಡಿಯಲ್ಲಿ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ದೇಶವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನಿಯಮವನ್ನು ಪಾಲಿಸುತ್ತಿದೆ ಎಂದರು.