ಟ್ರಂಪ್‌ ಪ್ರಮಾಣ ವಚನಕ್ಕೆ ಮೋದಿ ಕರೆಯಿರಿ ಎಂದು ಕೇಳಲು ಮಂತ್ರಿ ಅಮೆರಿಕಕ್ಕೆ ಹೋಗಿದ್ದರು : ರಾಹುಲ್‌

| N/A | Published : Feb 04 2025, 08:28 AM IST

Rahul Gandhi

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಫಿಕ್ಸ್‌ ಮಾಡಲೆಂದೇ ವಿದೇಶಾಂಗ ಸಚಿವ ಜೈಶಂಕರ್‌ ಕಳೆದ ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದರು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಫಿಕ್ಸ್‌ ಮಾಡಲೆಂದೇ ವಿದೇಶಾಂಗ ಸಚಿವ ಜೈಶಂಕರ್‌ ಕಳೆದ ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದರು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ರಾಹುಲ್‌ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ತಮ್ಮ ಆರೋಪಕ್ಕೆ ರಾಹುಲ್‌ ಸಾಕ್ಷ್ಯ ನೀಡಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಕೂಡ ಇಂಥ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ರಾಹುಲ್‌ಗೆ ಸೂಚಿಸಿದ್ದಾರೆ.

ಈ ನಡುವೆ ತಮ್ಮ ಮೇಲಿನ ಆರೋಪವನ್ನು ಸಚಿವ ಜೈಶಂಕರ್‌ ಸ್ಪಷ್ಟವಾಗಿ ಅಲ್ಲಗಳೆದಿದ್ದು, ರಾಜಕೀಯ ಉದ್ದೇಶದಿಂದ ರಾಹುಲ್‌ ಈ ಸುಳ್ಳು ಹೇಳಿಕೆ ನೀಡಿದ್ದರೂ ಅದು ವಿದೇಶದಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಗಾ ಆರೋಪ:

ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ರಾಹುಲ್ ಗಾಂಧಿ ಯಾರ ಹೆಸರನ್ನೂ ನೇರವಾಗಿ ಹೇಳದೇ, ‘ನಮ್ಮ ಪ್ರಧಾನಿಗಳಿಗೆ ಅಮೆರಿಕ ಅಧ್ಯಕ್ಷರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯುವ ಉದ್ದೇಶದಿಂದ ನಾವಂತೂ ನಮ್ಮ ವಿದೇಶಾಂಗ ಸಚಿವರನ್ನು ಅಮೆರಿಕಕ್ಕೆ ಕಳುಹಿಸುತ್ತಿರಲಿಲ್ಲ’ ಎಂದು ಬಿಜೆಪಿಗೆ ಟಾಂಗ್‌ ನೀಡಿದ್ದರು.

ತಿರುಗೇಟು:

ಇದಕ್ಕೆ ತಿರುಗೇಟು ನೀಡಿರುವ ಸಚಿವ ಜೈಶಂಕರ್‌, ‘ಕಳೆದ ಡಿಸೆಂಬರ್‌ನಲ್ಲಿ ನಾನು ಅಮೆರಿಕಕ್ಕೆ ಭೇಟಿ ನೀಡಿದ್ದು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲಿವಾನ್‌ ಜೊತೆ ಚರ್ಚಿಸಲು. ಜೊತೆಗೆ ಅಮೆರಿಕದಲ್ಲಿನ ಭಾರತೀಯ ರಾಯಭಾರಿಯನ್ನು ಭೇಟಿ ಮಾಡುವ ಉದ್ದೇಶದಿಂದ. ಆದರೆ ಯಾವುದೇ ಹಂತದಲ್ಲೂ ಭಾರತದ ಪ್ರಧಾನಿಯ ಅಮೆರಿಕದ ಭೇಟಿಯ ಕುರಿತು ಚರ್ಚೆ ನಡೆಸಿಲ್ಲ. ಅಮೆರಿಕ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರದಂಥ ಸಮಾರಂಭದಲ್ಲಿ ಭಾರತದ ಪ್ರಧಾನಿ ಭಾಗಿಯಾಗುವುದಿಲ್ಲ ಎನ್ನುವುದು ಸಾಮಾನ್ಯ ಜ್ಞಾನ. ಇಂಥ ಕಾರ್ಯಕ್ರಮದಲ್ಲಿ ದೇಶವನ್ನು ವಿಶೇಷ ಪ್ರತಿನಿಧಿಗಳು ಪ್ರತಿನಿಧಿಸುತ್ತಾರೆ. ರಾಹುಲ್‌ರ ಇಂಥ ಸುಳ್ಳಿನ ಹಿಂದೆ ರಾಜಕೀಯ ಉದ್ದೇಶವಿದ್ದರೂ ಅದು ವಿದೇಶಗಳಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತದೆ’ ಎಂದು ಚಾಟಿ ಬೀಸಿದ್ದಾರೆ.