ಸಿದ್ದು, ಡಿಕೆಶಿಯಿಂದ ಶಾಸಕರ ಕುದುರೆ ವ್ಯಾಪಾರ: ಜೋಶಿ

| N/A | Published : Jul 14 2025, 05:30 AM IST

Prahlad Joshi

ಸಾರಾಂಶ

ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರೂ ನಾಯಕರು ಪರಸ್ಪರರ ಬಣದ ಶಾಸಕರ ಬೆಂಬಲ ಪಡೆಯಲು ಅವರೊಳಗೆ ಕುದುರೆ ವ್ಯಾಪಾರ ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿ : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಹೀಗಾಗಿ, ಇಬ್ಬರೂ ನಾಯಕರು ಪರಸ್ಪರರ ಬಣದ ಶಾಸಕರ ಬೆಂಬಲ ಪಡೆಯಲು ಅವರೊಳಗೆ ಕುದುರೆ ವ್ಯಾಪಾರ ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಪೂರ್ಣಾವಧಿ ಸಿಎಂ, ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿದ್ದಾರೆ. ಇನ್ನೊಂದೆಡೆ, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ಶಾಸಕರ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ, ಇಬ್ಬರೂ ನಾಯಕರು ತಮ್ಮ ಆರ್ಥಿಕ ಶಕ್ತಿ ಬಳಸಿಕೊಂಡು ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಯಾಗಬೇಕೆಂದು ಡಿ.ಕೆ.ಶಿವಕುಮಾರ್‌ ಪರಸ್ಪರರ ಬಣದ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನಲ್ಲಿ ಈಗ ಹೈಕಮಾಂಡ್‌ನ ನಿಯಂತ್ರಣ ತಪ್ಪಿದೆ. ಹೆಚ್ಚು ಶಾಸಕರ ಬೆಂಬಲ ತೋರಿಸಿದವರೇ ಸಿಎಂ ಆಗಬಹುದು ಎನ್ನುವ ಮನಸ್ಥಿತಿಯಿಂದ ಈ ರೀತಿಯ ವ್ಯವಹಾರಗಳು ನಡೆಯುತ್ತಿವೆ. ಹೀಗಾಗಿ, ವ್ಯಾಪಾರಕ್ಕೆ ಕುದುರೆಗಳು ತಯಾರಾಗಿವೆ. ಖರೀದಿಗೆ ಅವರಲ್ಲಿಯೇ ಸ್ಪರ್ಧೆ ನಡೆದಿದೆ. ಇಬ್ಬರ ನಡುವೆ ಕುದುರೆ ವ್ಯಾಪಾರ, ಕತ್ತೆ ವ್ಯಾಪಾರ ನಡೆಯುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಇಬ್ಬರೂ ನಾಯಕರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ಆದ್ದರಿಂದ ನಾವು (ಬಿಜೆಪಿ) ಮಧ್ಯ ಪ್ರವೇಶಿಸಲು ಯಾವುದೇ ಅವಕಾಶವಿಲ್ಲ. ಅಲ್ಲದೆ, ನಾವು ಅಂತಹ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಜನರ ಜನಾದೇಶಕ್ಕೆ ವಿರುದ್ಧವಾಗಿ ಹೋಗಬಾರದು ಎಂಬುದು ಬಿಜೆಪಿಯ ಅಧಿಕೃತ ನಿಲುವು. ಜನಾದೇಶವನ್ನು ಹೊಂದಿರುವ ಕಾಂಗ್ರೆಸ್, ಐದು ವರ್ಷ ಪೂರ್ಣಗೊಳಿಸಬೇಕು ಎಂಬುದು ನಮ್ಮ ನಿಲುವು. ಹೀಗಾಗಿ, ಬಿಜೆಪಿ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.

ಇದೇ ವೇಳೆ, ‘ಬಿಜೆಪಿ ಹೈಕಮಾಂಡ್‌ 55 ಕಾಂಗ್ರೆಸ್‌ ಶಾಸಕರ ಟಾರ್ಗೆಟ್‌ ಲಿಸ್ಟ್‌ ಮಾಡಿದೆ’ ಎಂಬ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ತಿರುಗೇಟು ನೀಡಿ, ಇ.ಡಿ.ಲಿಸ್ಟ್‌ನಲ್ಲಿ ಅವರ ಹೆಸರು ಬರುತ್ತದೆ ಎಂದರೆ ಅವರು ಏನಾದರೂ ತಪ್ಪು ಮಾಡಿದ್ದಾರೆ ಅಂತ ಅರ್ಥ. ಅವ್ಯವಹಾರ, ಭ್ರಷ್ಟಾಚಾರ ಮಾಡಿದವರಷ್ಟೇ ಇ.ಡಿ. ದಾಳಿಗೆ ಸಿಲುಕುತ್ತಾರೆ. ಅವರು ಸುಮ್ಮನೆ 55 ಶಾಸಕರು ಅಂತ ಹೇಳಿ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಅವರ ಆರೋಪ ಸುಳ್ಳು. ಅವರ ನೂನ್ಯತೆಗಳನ್ನು ಎತ್ತಿ ಹಿಡಿದು ಹೋರಾಟ ನಡೆಸಲು ನಮ್ಮ ನಾಯಕರಿಗೆ ಸೂಚನೆ ನೀಡಿದ್ದೇವೆ ಎಂದರು.

ಸಚಿವ ಜೋಶಿ ಆರೋಪಿಸಿದ್ದೇನು?

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ

ಹೀಗಾಗಿ ಇಬ್ಬರೂ ಎದುರಾಳಿ ಬಣದ ಕಾಂಗ್ರೆಸ್‌ ಶಾಸಕರ ಬೆಂಬಲ ಪಡೆಯಲು ಮನಿ ಪವರ್‌ ಬಳಸಿ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ

ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದರೆ, ಮುಖ್ಯಮಂತ್ರಿ ಸ್ಥಾನ ಪಡೆಯಲು ಡಿ.ಕೆ.ಶಿವಕುಮಾರ್‌ ಭಾರೀ ಪ್ರಯತ್ನ

ಕಾಂಗ್ರೆಸ್‌ನ 55 ಶಾಸಕರನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ ಎಂಬ ಆರೋಪ ಪೂರ್ಣವಾಗಿ ಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ

ಜನಾದೇಶ ಹೊಂದಿರುವ ಸರ್ಕಾರ ಉರುಳಿಸಲು ನಾವು ಮುಂದಾಗಲ್ಲ. ಜನಾದೇಶಕ್ಕೆ ವಿರುದ್ಧ ಹೋಗದಿರುವುದು ಬಿಜೆಪಿಯ ಸ್ಪಷ್ಟ ನಿಲುವು

ಕಾಂಗ್ರೆಸ್‌ನಲ್ಲಿ ಖರೀದಿಗೆ ಯಾರೂ ಇಲ್ಲ: ಸಚಿವ ರೆಡ್ಡಿ

ಕಾಂಗ್ರೆಸ್‌ನಲ್ಲಿ ಖರೀದಿಗೆ ಯಾವ ಶಾಸಕರೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್‌ ಸೇರಿದಂತೆ ಎಲ್ಲರ ಬೆಂಬಲ ಇದೆ. ಜೋಶಿಯವರು ರಾಜ್ಯ, ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಕೇವಲ ನೆಗೆಟಿವ್ ಮಾತ್ರ ಮಾತನಾಡುತ್ತಾರೆ. ನೆಗೆಟಿವ್ ಮಾತನಾಡಿಲ್ಲ ಎಂದರೆ ಅವರಿಗೆ ನಿದ್ದೆ ಬರುವುದಿಲ್ಲ.

Read more Articles on