ಸಾರಾಂಶ
ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾ ಸೇರಿದಂತೆ ವಿಶ್ವದ ಹಲವು ಪ್ರಮುಖ ದೇಶಗಳ ಮೇಲೆ ತೆರಿಗೆ ದಾಳಿ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಚೀನಾಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ. ಚೀನಾ ತಿನ್‌ಜಿಯಾನ್ ನಗರದಲ್ಲಿ ಆ.31 ಮತ್ತು ಸೆ.1ರಂದು ವಾರ್ಷಿಕ ಶಾಂಘೈ ಶೃಂಗ ಸಭೆ (ಎಸ್‌ಸಿಒ) ನಡೆಯಲಿದ್ದು ಅದರಲ್ಲಿ ಮೋದಿ ಭಾಗಿಯಾಗುವ ಸಾಧ್ಯತೆ ಇದೆ.
‘ಮೇಲ್ನೋಟಕ್ಕೆ ಇದು 2020ರ ಗಲ್ವಾನ್ ಸಂಘರ್ಷದ ಬಳಿಕ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಎಂದು ಹೇಳಲಾಗಿದ್ದರೂ, ಮೋದಿ ಚೀನಾ ಭೇಟಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಯತ್ನ ಎಂದೇ ರಾಜಕೀಯ ವಲಯದಲ್ಲಿ ಬಣ್ಣಿಸಲಾಗಿದೆ. ಜೊತೆಗೆ ಅಮೆರಿಕದ ಸವಾಲನ್ನು ಮೆಟ್ಟಿನಿಲ್ಲಲು ಎರಡು ಬದ್ಧ ವೈರಿ ದೇಶಗಳಾದ ಭಾರತ ಮತ್ತು ಚೀನಾ ಒಂದಾಗುವ ಸಾಧ್ಯತೆಯೂ ಇಲ್ಲದಿಲ್ಲ’ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಭೇಟಿಯ ಅಜೆಂಡಾ:
ಆ.29ರ ಆಸುಪಾಸಿನಲ್ಲಿ ಮೋದಿ ಜಪಾನ್‌ಗೆ ಭೇಟಿ ನೀಡಲಿದ್ದು ಅಲ್ಲಿಂದಲೇ ಚೀನಾಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಚೀನಾ ತಿನ್‌ಜಿಯಾನ್ ನಗರದಲ್ಲಿ ಆ.31 ಮತ್ತು ಸೆ.1ರಂದು ವಾರ್ಷಿಕ ಶಾಂಘೈ ಶೃಂಗ ಸಭೆ (ಎಸ್‌ಸಿಓ) ನಡೆಯಲಿದ್ದು ಅದರಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಒಂದು ವೇಳೆ ಭೇಟಿ ನಡೆದರೆ ಅದು 7 ವರ್ಷಗಳ ಬಳಿಕ ಮತ್ತು 2020ರಲ್ಲಿ ನಡೆದ ಗಲ್ವಾನ್ ಸಂಘರ್ಷದ ಬಳಿಕದ ಮೊದಲ ಭೇಟಿಯಾಗಲಿದೆ. ಈ ಹಿಂದೆ ಮೋದಿ 2018ರಲ್ಲಿ ಚೀನಾಗೆ ಭೇಟಿ ನೀಡಿದ್ದರು.
2020ರ ಗಲ್ವಾನ್ ಸಂಘರ್ಷದ ಬಳಿಕ ಉಭಯ ದೇಶಗಳ ಸಂಬಂಧ ಪೂರ್ಣ ಹದಗೆಟ್ಟಿತ್ತು. ಆದರೆ ಕಳೆದೊಂದು ವರ್ಷದಿಂದ ಉಭಯ ದೇಶಗಳು ಮತ್ತೆ ಸೇನಾಧಿಕಾರಿಗಳ ಮಟ್ಟದ ಮಾತುಕತೆ ಆರಂಭಿಸಿದ್ದವು. ಅದರ ಭಾಗವಾಗಿ ಡೆಮ್‌ಚುಕ್ ಮತತು ದೆಪ್ಸಂಗ್‌ನಿಂದ ಸೇನಾ ಹಿಂಪಡೆತಕ್ಕೆ ಉಭಯ ದೇಶಗಳು ಸಮ್ಮತಿಸಿದ್ದವು. ಜೊತೆಗೆ ಭಾರತೀಯರಿಗೆ ತನ್ನ ಗಡಿಯ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಚೀನಾ ಅನುಮತಿ ನೀಡಿತ್ತು. ಮತ್ತೊಂದೆಡೆ ಚೀನಾ ಪ್ರವಾಸಿಗರಿಗೆ ಇತ್ತೀಚೆಗೆ ಭಾರತ ವೀಸಾ ವಿತರಣೆ ಆರಂಭಿಸಿತ್ತು.
- 2018ರಲ್ಲಿ ಜೂನ್‌ನಲ್ಲಿ ಮೋದಿ ಚೀನಾದಲ್ಲಿನ ಎಸ್‌ಸಿಒ ಶೃಂಗಕ್ಕೆ ಹೋಗಿದ್ದರು
- ಇದಾದ ನಂತರ 2020ರಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆದಿತ್ತು
- ಬಳಿಕ ಪ್ರಧಾನಿ ನರೇಂದ್ರ ಮೋದಿ- ಚೀನಾ ಅಧ್ಯಕ್ಷ ಕ್ಸಿ ಸಂಬಂಧ ಹಳಸಿತ್ತು
- ಈಗ ಅಮೆರಿಕ ಅಧ್ಯಕ್ಷ ಟ್ರಂಪ್‌ರಿಂದ ಭಾರತ, ಚೀನಾ ಮೇಲೆ ತೆರಿಗೆ ಪ್ರಹಾರ
- ಇದರ ಬೆನ್ನಲ್ಲೇ ಮಾಸಾಂತ್ಯಕ್ಕೆ ಮೋದಿ ಚೀನಾ ಪ್ರವಾಸ ನಡೆಸುವ ಸಾಧ್ಯತೆ
- ಈ ಮೂಲಕ ಟ್ರಂಪ್ ವಿರುದ್ಧ ಒಟ್ಟಾಗಿದ್ದೇವೆ ಎಂಬ ಸಂದೇಶ ರವಾನೆ ಸಂಭವ