ಸಾರಾಂಶ
ನ್ಯೂಯಾರ್ಕ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ದೇಶದಲ್ಲಿ ಸುಭದ್ರ ಆಡಳಿತದ ಮೂಲಕ ಅಗಾಧ ಬದಲಾವಣೆ ತಂದಿದ್ದಾರೆ. ಭ್ರಷ್ಟಾಚಾರ ಹತ್ತಿಕ್ಕಿದ್ದಾರೆ. ಅವರು ತಂದಂಥ ನೀತಿ ಅಮೆರಿಕಕ್ಕೂ ಬೇಕು ಎಂದು ಜೆಪಿ ಮೋರ್ಗನ್ ಸಂಸ್ಥೆಯ ಸಿಇಒ ಜೇಮಿ ಡೈಮನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ 40 ಕೋಟಿ ಜನರನ್ನು ಬಡತನದಿಂದ ಹೊರತಂದು ದೇಶದ ಮಾನವ ಸಂಪನ್ಮೂಲವನ್ನು ಬೆಳೆಸಿದ್ದಾರೆ. ಜೊತೆಗೆ 70 ಕೋಟಿ ಜನರಿಗೆ ಬ್ಯಾಂಕ್ ಖಾತೆ ತೆರೆಯುವ ಮೂಲಕ ಡಿಜಿಟಲ್ ಆರ್ಥಿಕತೆಗೆ ಒತ್ತು ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮೆರಿಕಕ್ಕೂ ಅಗತ್ಯ:
ಇದೇ ವೇಳೆ ಪರೋಕ್ಷ ತೆರಿಗೆ ಪದ್ಧತಿಯನ್ನು ಅಳವಡಿಸುವ ಜೊತೆಗೆ ಅಧಿಕಾರಶಾಹಿತ್ವದಲ್ಲಿ ಬದಲಾವಣೆ ತಂದು ಭ್ರಷ್ಟಾಚಾರಕ್ಕೆ ಮೋದಿ ಕಡಿವಾಣ ಹಾಕಿದ್ದಾರೆ. ಅಮೆರಿಕದಲ್ಲೂ ಭ್ರಷ್ಟಾಚಾರವನ್ನು ತೊಲಗಿಸಲು ನರೇಂದ್ರ ಮೋದಿಯವರ ಆಡಳಿತ ನೀತಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.