10 ವರ್ಷದಲ್ಲಿ 22 ಬಿಲಿಯನೇರ್‌ ಸೃಷ್ಟಿ ಮೋದಿ ಸಾಧನೆ: ರಾಹುಲ್‌

| Published : May 08 2024, 01:33 AM IST / Updated: May 08 2024, 07:12 AM IST

ಸಾರಾಂಶ

10 ವರ್ಷಗಳಲ್ಲಿ 22 ಶತಕೋಟ್ಯಧೀಶರನ್ನು (ಬಿಲಿಯನೇರ್‌) ಸೃಷ್ಟಿಸಿದ್ದೇ ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ನಾವು ಅಧಿಕಾರಕ್ಕೆ ಬಂದಲ್ಲಿ ಕೋಟ್ಯಂತರ ಜನರನ್ನು ಲಖಪತಿಗಳಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಚಾಯ್‌ಬಾಸ್‌: 10 ವರ್ಷಗಳಲ್ಲಿ 22 ಶತಕೋಟ್ಯಧೀಶರನ್ನು (ಬಿಲಿಯನೇರ್‌) ಸೃಷ್ಟಿಸಿದ್ದೇ ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ನಾವು ಅಧಿಕಾರಕ್ಕೆ ಬಂದಲ್ಲಿ ಕೋಟ್ಯಂತರ ಜನರನ್ನು ಲಖಪತಿಗಳಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮಂಗಳವಾರ ಜಾರ್ಖಂಡ್‌ನ ಚಾಯ್‌ಬಾಸ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಆದಿವಾಸಿಗಳಿಗೆ ಸೇರಿದ ಜಲ, ಜಂಗಲ್‌ ಮತ್ತು ಜಮೀನನ್ನು 14-15 ಕೈಗಾರಿಕೋದ್ಯಮಿಗಳಿಗೆ ನೀಡಲು ಪ್ರಧಾನಿ ಮೋದಿ ಯೋಜಿಸಿದ್ದಾರೆ. ನರೇಂದ್ರ ಮೋದಿ ಅದಾನಿ ಮತ್ತು ಅಂಬಾನಿಗಾಗಿ ಕೆಲಸ ಮಾಡುತ್ತಾರೆ. ಅವರು 10 ವರ್ಷಗಳಲ್ಲಿ 22 ಶತಕೋಟ್ಯಧೀಶರರ ಸೃಷ್ಟಿ ಮಾಡಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರುಪಾಯಿ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಆದಿವಾಸಿಗಳು ಮನೆಕೆಲಸಕ್ಕೆ ಸೀಮಿತವಾಗಿರಬೇಕು ಎಂಬುದು ಬಿಜೆಪಿ ಗುರಿ. ಆದಿವಾಸಿಗಳು ವೈದ್ಯರು, ಎಂಜಿನಿಯರ್‌ ಮತ್ತು ವಕೀಲರಾಗುವುದು ಅವರಿಗೆ ಬೇಕಿಲ್ಲ. ದೇಶವನ್ನು ಮುನ್ನಡೆಸುವ 90 ಐಎಎಸ್‌ ಅಧಿಕಾರಿಗಳಲ್ಲಿ ಓರ್ವ ಮಾತ್ರ ಆದಿವಾಸಿ. ಆದರೆ ಅವರನ್ನೂ ದೆಹಲಿಯಲ್ಲಿ ಕಡೆಗಣಿಸಲಾಗಿದೆ’ ಎಂದು ರಾಹುಲ್‌ ಆರೋಪಿಸಿದರು.

ಜೊತೆಗೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆ ರದ್ದು ಮಾಡಲಿದೆ. ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರಲಿದೆ. ಜೊತೆಗೆ ಆದಿವಾಸಿಗಳಿಗೆ ಪ್ರತ್ಯೇಕ ಸರ್ನಾ ಧಾರ್ಮಿಕ ಸಂಹಿತೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.