ಸಾರಾಂಶ
ಕಂಧಮಾಲ್ (ಒಡಿಶಾ): ‘ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ. ಆದರೆ, ಅವರ ಆರ್ಥಿಕತೆ ತೀರಾ ಸಂಕಷ್ಟದಲ್ಲಿದೆ. ಹೀಗಾಗಿ ಅವರು ಅಣುಬಾಂಬ್ ಮಾರಲು ಯತ್ನಿಸುತ್ತಿದ್ದಾರೆ. ಆದರೆ ಅವು ಕಳಪೆ ಗುಣಮಟ್ಟ ಹೊಂದಿರುವುದರಿಂದ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಮತಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಪಾಕಿಸ್ತಾನದ ವಿರುದ್ಧ 26/11 ಮುಂಬೈ ದಾಳಿ ಬಳಿಕ ಅಂದಿನ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು, ‘ಪಾಕ್ ಬಳಿ ಅಣುಬಾಂಬ್ ಇದೆ. ಹೀಗಾಗಿ ಆ ದೇಶವನ್ನು ಭಾರತ ಗೌರವಿಸಬೇಕು’ ಎಂದು ಹೇಳಿರುವುದಕ್ಕೆ ಶನಿವಾರ ಒಡಿಶಾದ ಚುನಾವಣಾ ರ್‍ಯಾಲಿಯಲ್ಲಿ ಪ್ರತಿಕ್ರಿಯೆ ನೀಡಿದ ಮೋದಿ, ‘ಕಾಂಗ್ರೆಸ್‌ನವರು ಪಾಕಿಸ್ತಾನದ ಬಾಂಬ್ ಬಗ್ಗೆ ಮಾತನಾಡುತ್ತಾರೆ. ಆದರೆ ಪಾಕಿಸ್ತಾನದ ಪರಿಸ್ಥಿತಿ ಹೇಗಿದೆಯೆಂದರೆ ಅವರಿಗೆ ಆ ಬಾಂಬ್ ಇಟ್ಟುಕೊಳ್ಳುವುದು ಹೇಗೆಂದು ಗೊತ್ತಿಲ್ಲ. ಅಲ್ಲದೆ, ಅವರಿಗೆ ಆರ್ಥಿಕ ಸಂಕಷ್ಟ ಇದೆ. ಅವರಿಗೆ ಹಣ ಬೇಕು. ಹೀಗಾಗಿ ಅವುಗಳನ್ನು ದುಡ್ಡಿಗೆ ಮಾರಲು ಯತ್ನಿಸುತ್ತಿದ್ದಾರೆ. ಆದರೆ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ. ಏಕೆಂದರೆ ಎಲ್ಲರಿಗೂ ಅವುಗಳ ಗುಣಮಟ್ಟದ ಬಗ್ಗೆ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.
ಭಾರತೀಯರನ್ನೇ ಹೆದರಿಸಲು ಕಾಂಗ್ರೆಸ್ ಯತ್ನ: ಇದೇ ವೇಳೆ, ಮಣಿಶಂಕರ್ ಅಯ್ಯರ್ ಮತ್ತು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ‘ಪದೇಪದೇ ಕಾಂಗ್ರೆಸ್‌ನವರು ತಮ್ಮ ದೇಶದ ಜನರನ್ನೇ ಹೆದರಿಸಲು ಯತ್ನಿಸುತ್ತಾರೆ. ಹುಷಾರಾಗಿರಿ, ಪಾಕಿಸ್ತಾನದ ಬಳಿ ಬಾಂಬ್ ಇದೆ ಎನ್ನುತ್ತಾರೆ. ಈ ಜನರು ದೇಶದ ಜನರ ಮನಸ್ಥಿತಿಯನ್ನೂ ಸಾಯಿಸುತ್ತಿದ್ದಾರೆ. ಇವರು ತಮ್ಮದೇ ದೇಶದ ಜನರ ಮನಸ್ಸಿನಲ್ಲಿ ಭಯವನ್ನು ಬಿತ್ತಲು ಯತ್ನಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
ವೋಟ್‌ಬ್ಯಾಂಕ್‌ಗಾಗಿ ಉಗ್ರರ ಮೇಲೆ ಕ್ರಮವಿಲ್ಲ: ‘26/11 ಮುಂಬೈ ದಾಳಿಕೋರರ ಮೇಲೆ ಕ್ರಮ ಕೈಗೊಂಡರೆ ತಮ್ಮ ವೋಟ್‌ಬ್ಯಾಂಕ್ ಹಾಳಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ದಶಕಗಳಿಂದ ಕಾಂಗ್ರೆಸ್‌ನ ದುರ್ಬಲ ಮನಸ್ಥಿತಿಯಿಂದಾಗಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪದೇಪದೇ ಸಂಭವಿಸುತ್ತಿದ್ದ ಭಯೋತ್ಪಾದಕರ ದಾಳಿಗಳನ್ನು ದೇಶದ ಜನರು ಯಾವತ್ತೂ ಮರೆಯುವುದಿಲ್ಲ. ಭಯೋತ್ಪಾದಕರು ದಾಳಿ ನಡೆಸಿದಾಗ ಕಾಂಗ್ರೆಸ್ ನಾಯಕರು ಭಯೋತ್ಪಾದನೆಯ ಸೂತ್ರಧಾರರ ಜೊತೆಗೇ ಕುಳಿತುಕೊಳ್ಳುತ್ತಿದ್ದರು’ ಎಂದು ಆರೋಪಿಸಿದರು.