ಸಾರಾಂಶ
ಕಳೆದ 2 ತಿಂಗಳ ಅವಧಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶವ್ಯಾಪಿ ಸುತ್ತಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ತರಲು ಮತ್ತು ಸತತ ಮೂರನೇ ಬಾರಿ ಪ್ರಧಾನಿಯಾಗುವ ದಾರಿಯಲ್ಲಿ ಕಳೆದ 2 ತಿಂಗಳ ಅವಧಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶವ್ಯಾಪಿ ಸುತ್ತಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಗುರುವಾರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯ ಕೊನೆಯ ಪ್ರಚಾರ ಮುಗಿಸಿದ ಪ್ರಧಾನಿ ಮೋದಿ, ಈ ಬಾರಿ ಚುನಾವಣಾ ರ್‍ಯಾಲಿ ಮತ್ತು ಮಾಧ್ಯಮ ಸಂದರ್ಶನದಲ್ಲಿ ವಿನೂತನ ದಾಖಲೆ ಬರೆದಿದ್ದಾರೆ.
ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಸ್ಟಾರ್ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ, ಚುನಾವಣಾ ನೀತಿ ಸಂಹಿತೆಯಾದ ಘೋಷಣೆಯಾದ ನಂತರದ 76 ದಿನಗಳ ಅವಧಿಯಲ್ಲಿ ಒಟ್ಟು 206 ಕಾರ್ಯಕ್ರಮಗಳಲ್ಲಿ ಬಾಗಿಯಾಗಿದ್ದಾರೆ. ಇದರಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ರ್‍ಯಾಲಿ ಮತ್ತು ರೋಡ್ ಶೋ ಸೇರಿವೆ. ಇದೇ ಅವಧಿಯಲ್ಲಿ ಪ್ರಧಾನಿ 80ಕ್ಕೂ ಹೆಚ್ಚು ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ ಈವರೆಗೆ ಯಾವುದೇ ಪ್ರಧಾನಿಯೂ ಮಾಡದ ಸಾಧನೆ ಮಾಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ 68 ದಿನಗಳ ಕಾಲ ಪ್ರಚಾರಕ್ಕೆ ಅವಕಾಶ ಸಿಕ್ಕಿದ್ದು, ಆಗ ಮೋದಿ 145 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅದಕ್ಕೆ ಹೋಲಿಸಿದರೆ ಈ ವರ್ಷ ಪ್ರಚಾರಕ್ಕೆ 8 ದಿನ ಹೆಚ್ಚು ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಕಳೆದ ವರ್ಷಕ್ಕಿಂತ 61 ಹೆಚ್ಚು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಿದ್ದರು.
ಒಂದೇ ತಿಂಗಳಲ್ಲಿ 96 ಕಡೆ ಪ್ರಚಾರ: ಮಾ.16ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 76 ದಿನಗಳಲ್ಲಿ ಮೋದಿ ಸರಾಸರಿ ದಿನಕ್ಕೆ 3 ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಮೂರು ದಿನ ಬರೋಬ್ಬರಿ 5 ರ್‍ಯಾಲಿಗಳಲ್ಲಿ ಭಾಗವಹಿಸಿದರೆ, 22 ದಿನಗಳಂದು ನಾಲ್ಕು ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಮೇ ತಿಂಗಳೊಂದರಲ್ಲೇ 96 ಕಡೆ ಪ್ರಚಾರ ಮಾಡಿದ್ದಾರೆ.
ಕರ್ನಾಟಕದಲ್ಲಿ 11 ಕಡೆ ಪ್ರಚಾರ: ಪ್ರಧಾನಿ ಮೋದಿ ಕರ್ನಾಟಕದಲ್ಲಿ 11 ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇನ್ನು 80 ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು (30) ಸ್ಥಳಗಳಲ್ಲಿ ಪ್ರಚಾರ ನಡೆಸಿದ್ದರೆ, ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಕೇವಲ ಐದು ಸ್ಥಳಗಳಲ್ಲಿ ಪ್ರಚಾರ ಮಾಡಿದ್ದಾರೆ.