ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಅಧಿಕಾರಾವಧಿಯಲ್ಲಿ ಮಧ್ಯಮ ವರ್ಗದವರ ತೆರಿಗೆ ಹೊರೆ ಕಡಿಮೆಯಾಗಿದೆ ಎಂಬ ಮಾಹಿತಿ ಅಂಕಿ ಅಂಶಗಳಿಂದ ಹೊರಬಿದ್ದಿದೆ.
ಕಳೆದ 10 ವರ್ಷಗಳಲ್ಲಿ ಸಲ್ಲಿಕೆ ಮಾಡಲಾದ ಆದಾಯ ತೆರಿಗೆ ರಿಟರ್ನ್ಸ್ ಅಧ್ಯಯನದ ಅನ್ವಯ, ಮಧ್ಯಮ ವರ್ಗ ಎಂದು ಗುರುತಿಸಲಾಗುವ, ವಾರ್ಷಿಕ 20 ಲಕ್ಷಕ್ಕಿಂತ ಕಡಿಮೆ ಆದಾಯದವರ ತೆರಿಗೆ ಹೊರೆ ಕಡಿಮೆ ಆಗಿದೆ. ಒಟ್ಟು ತೆರಿಗೆಯಲ್ಲಿ 10 ಲಕ್ಷಕ್ಕಿಂತ ಕಡಿಮೆ ಆದಾಯದವರ ಪಾಲು 2013-14ರಲ್ಲಿ ಶೇ.10.17ರಷ್ಟು ಇದ್ದಿದ್ದು , 2023-24ರಲ್ಲಿ ಶೇ.6.22ಕ್ಕೆ ಇಳಿದಿದೆ.
ಆದರೆ ಇದೇ ಅವಧಿಯಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಆದಾಯದವರ ತೆರಿಗೆ ಪಾವತಿ ಹೆಚ್ಚಾಗಿದೆ. 2013-14ರಲ್ಲಿ ವಾರ್ಷಿಕ 50 ಲಕ್ಷ ಆದಾಯ ತೋರಿಸಿದವರ ಪ್ರಮಾಣ 1.85 ಲಕ್ಷ ಇದ್ದಿದ್ದು, 2023-24ರಲ್ಲಿ 9.39 ಲಕ್ಷಕ್ಕೆ ಏರಿದೆ. ಜೊತೆಗೆ ಈ ವರ್ಗ ಪಾವತಿ ಮಾಡುತ್ತಿದ್ದ ಆದಾಯ ತೆರಿಗೆ ಪ್ರಮಾಣವು 2.52 ಲಕ್ಷ ಕೋಟಿ ರು.ನಿಂದ 9.62 ಲಕ್ಷ ಕೋಟಿ ರು.ಗೆ ಏರಿದೆ. ಸರ್ಕಾರ ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ.76ರಷ್ಟು ಪಾಲು 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ವರ್ಗದಿಂದಲೇ ಬರುತ್ತಿದೆ.