ಸಾರಾಂಶ
ಥೇಣಿ: ಭ್ರಷ್ಟಾಚಾರ ಬೋಧಿಸುವ ವಿಶ್ವವಿದ್ಯಾನಿಲಯವನ್ನು ತೆರೆಯುವ ಯೋಚನೆಯಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಕುಲಪತಿಗಳನ್ನಾಗಿ ನೇಮಿಸಬಹುದು ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.
ಗುರುವಾರ ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ‘ಮೋದಿ ಡಿಎಂಕೆ ಪಕ್ಷವನ್ನು ಭ್ರಷ್ಟಾಚಾರದಲ್ಲಿ ಮುಳುಗಿರುವುದಾಗಿ ಆರೋಪಿಸುತ್ತಾರೆ. ಆದರೆ ಭ್ರಷ್ಟಾಚಾರದ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗುವಷ್ಟು ಭ್ರಷ್ಟಾಚಾರವನ್ನು ಪ್ರಧಾನಿ ಮೋದಿ ಮಾಡಿಸಿದ್ದಾರೆ. ಉದಾಹರಣೆಗೆ ಚುನಾವಣಾ ಬಾಂಢ್ ಹಗರಣ, ಪಿಎಂ ಕೇರ್ಸ್ ದೇಣಿಗೆ,, ಇತರ ಪಕ್ಷಗಳ ಕಳಂಕಿತ ನಾಯಕರನ್ನು ಬಿಜೆಪಿಗೆ ಪಕ್ಷಾಂತರಿಸಿ ಅವರಿಂದ ಹಫ್ತಾ ವಸೂಲಿ ಮಾಡುವ ಮೂಲಕ ಅತಿದೊಡ್ಡ ಭ್ರಷ್ಟಾಚಾರ ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಕಿಡಿಕಾರಿದರು.
ಉತ್ತರ ಭಾರತದಿಂದ ರ್‍ಯಾಲಿಗೆ ಜನ: ವೆಲ್ಲೂರಿನಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಮಾತನಾಡುತ್ತಿದ್ದಾಗ ಜನ ಅದಕ್ಕೆ ಚಪ್ಪಾಳೆ ತಟ್ಟಿ ಪ್ರಶ್ನೆಯನ್ನೂ ಸಹ ಕೇಳುತ್ತಿದ್ದರು. ಆದರೆ ಅವರೆಲ್ಲರನ್ನೂ ಉತ್ತರ ಭಾರತದಿಂದ ಹಣಕೊಟ್ಟು ಕರೆಸಲಾಗಿತ್ತು ಎಂದು ಸ್ಟಾಲಿನ್ ವ್ಯಂಗ್ಯವಾಡಿದರು.
ತಮಿಳು ಸಂಸ್ಕೃತಿಯ ನಾಶಕ: ಪ್ರಧಾನಿ ಮೋದಿಯು ಯಾವಾಗಲೂ ತಮಿಳು ಸಂಸ್ಕೃತಿಯನ್ನು ಉಳಿಸುವುದಾಗಿ ಮಾತನಾಡುತ್ತಾರೆ. ಆದರೆ ಆ ವಾಗ್ದಾನವನ್ನು ಅವರು ಹಿಂದಿಯಲ್ಲಿ ನೀಡುವಾಗ ಅವರನ್ನು ನಂಬಲು ಹೇಗೆ ಸಾಧ್ಯ? ಅವರು ತಮಿಳು ಸಂಸ್ಕೃತಿಯ ನಾಶಕ. ಈ ಬಾರಿ ಅವರನ್ನು ಆಡಳಿತಕ್ಕೆ ತಂದರೆ ದೇಶದ ಎಲ್ಲ ಭಾಷೆ, ಸಂಸ್ಕೃತಿಯನ್ನು ಸರ್ವನಾಶ ಮಾಡಿ ಒಂದು ಭಾಷೆ, ಒಂದು ಪಕ್ಷ, ಒಂದು ಆಡಳಿತವನ್ನು ಜಾರಿಗೆ ತಂದು ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಹಾಡುವ ಮೂಲಕ ಸರ್ವಾಧಿಕಾರವನ್ನು ಪ್ರಾರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮೋದಿಯನ್ನು ತೊಲಗಿಸಬೇಕಿದೆ. ಈ ಕೂಗು (ಮೋದಿಯನ್ನು ತೊಲಗಿಸಿ) ದೇಶಾದ್ಯಂತ ಮತ್ತಷ್ಟು ಪ್ರಬಲವಾಗಿ ಕೇಳಿಸುವಂತೆ ಸಾರಿ ಹೇಳಬೇಕಿದೆ’ ಎಂದು ಜನತೆಗೆ ಕರೆ ನೀಡಿದರು.