ದೇಶದಲ್ಲಿ ಕೋಮು ಸೌಹಾರ್ದತೆ ಸ್ಥಾಪಿಸುವ ಉದ್ದೇಶದೊಂದಿಗೆ, ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ಮಾತುಕತೆ ಏರ್ಪಡಿಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಇಸ್ಲಾಂನ ಕೆಲ ಪ್ರಮುಖ ಧರ್ಮಗುರುಗಳು ನಿರ್ಧರಿಸಿದ್ದಾರೆ

ನವದೆಹಲಿ: ದೇಶದಲ್ಲಿ ಕೋಮು ಸೌಹಾರ್ದತೆ ಸ್ಥಾಪಿಸುವ ಉದ್ದೇಶದೊಂದಿಗೆ, ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ಮಾತುಕತೆ ಏರ್ಪಡಿಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಇಸ್ಲಾಂನ ಕೆಲ ಪ್ರಮುಖ ಧರ್ಮಗುರುಗಳು ನಿರ್ಧರಿಸಿದ್ದಾರೆ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲಿಯಾಸಿ ತಿಳಿಸಿದ್ದಾರೆ.

ದೆಹಲಿಯ ಹರ್ಯಾಣ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವತ್‌ ಜತೆ ಸಂಘದ ಹಿರಿಯ ನಾಯಕರು, ಇಮಾಮ್‌ಗಳು, ಮುಫ್ತಿಗಳು ಮತ್ತು ಮದರಸಾಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಈ ಸಭೆಯನ್ನು ಸಂಘ ‘ಸಕಾರಾತ್ಮಕ’ ಸಭೆ ಎಂದು ಕರೆದಿದ್ದು, ‘ಇದು ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂವಾದ ನಡೆಸುವ ಪ್ರಕ್ರಿಯೆಯಾಗಿದೆ. ದೇಶದ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಹೇಗೆ ಕೆಲಸ ಮಾಡಬಹುದು ಎಂಬುದು ಇದರ ಮುಖ್ಯ ಉದ್ದೇಶವಾಗಿತ್ತು’ ಎಂದು ಆರ್‌ಎಸ್‌ಎಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಸುನಿಲ್‌ ಅಂಬೇಕರ್‌ ತಿಳಿಸಿದ್ದಾರೆ.