ಕೇರಳ ಕಲಾವಿದರ ಸಂಘಕ್ಕೆ ಮೋಹನಲಾಲ್ ಗುಡ್‌ಬೈ

| Published : Aug 28 2024, 01:33 AM IST

ಸಾರಾಂಶ

ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮಾ) ಅಧ್ಯಕ್ಷ ನಟ ಮೋಹನ್‌ಲಾಲ್‌ ಮತ್ತು ಸಂಘದ ಇತರೆ 17 ಸದಸ್ಯರು ಮಂಗಳವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮಾ) ಅಧ್ಯಕ್ಷ ನಟ ಮೋಹನ್‌ಲಾಲ್‌ ಮತ್ತು ಸಂಘದ ಇತರೆ 17 ಸದಸ್ಯರು ಮಂಗಳವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಆಡಳಿಯ ಮಂಡಳಿಯ ಕೆಲ ಸದಸ್ಯರ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಬೆನ್ನಲ್ಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಸಂಘ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಘ, ‘ಅಮ್ಮಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಹೊಸ ನಾಯಕತ್ವ ಶೀಘ್ರವೇ ಬರಲಿದೆ ಎಂಬ ವಿಶ್ವಾಸ ನಮಗಿದೆ. ನಮ್ಮನ್ನು ವಿಮರ್ಶಿಸಿದ್ದಕ್ಕೆ ಮತ್ತು ಸರಿಪಡಿಸಿದ್ದಕ್ಕೆ ಧನ್ಯವಾದಗಳು. ಮುಂದಿನ 2 ತಿಂಗಳಲ್ಲಿ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಕರೆದು ಹೊಸ ಸಮಿತಿ ರಚಿಸಲಾಗುವುದು’ ಎಂದು ಹೇಳಿದೆ.

ಇದೇ ಸಮಿತಿಯ ಸದಸ್ಯರಾಗಿದ್ದ ಸಿದ್ದಿಕಿ ಈಗಾಗಲೇ ತಮ್ಮ ಮೇಲೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಇನ್ನೊಬ್ಬ ಸದಸ್ಯ ಬಾಬುರಾಜ್‌ ವಿರುದ್ಧವೂ ಇದೇ ರೀತಿಯ ಆರೋಪ ಕೇಳಿಬಂದಿದೆ.