ಸಾರಾಂಶ
ಬೆಂಗಳೂರು : ಸರ್ಕಾರದ ಖಾತೆಯಿಂದ ನೇರವಾಗಿ ಹಣವನ್ನು ಲೂಟಿ ಹೊಡೆಯುವ ಕಾಲದಲ್ಲಿ ನಾವಿದ್ದೇವೆ. ಆಡಳಿತ ವ್ಯವಸ್ಥೆಯಲ್ಲಿನ ದರೋಡೆಯ ಸ್ವರೂಪದ ಬಗ್ಗೆ ಜನರಿಗೆ ಅರಿವಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಭಾನುವಾರ ನಗರದ ಗಾಂಧಿ ಭವನದಲ್ಲಿ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ 21ನೇ ಶತಮಾನದಲ್ಲಿ ಗಾಂಧೀಜಿ 2 ದಿನಗಳ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಲಂಚ ತೆಗೆದುಕೊಂಡಾದರೂ ಕೆಲಸ ಮಾಡಿಕೊಡುತ್ತಿದ್ದರು. ಆದರೆ, ಇಂದು ಅದರ ಸ್ವರೂಪವೇ ಬದಲಾಗಿದೆ. ಸರ್ಕಾರದ ಖಾತೆಯಿಂದ ಲೂಟಿಕೋರರ ಮಕ್ಕಳು, ಕುಟುಂಬದವರು, ಸಂಬಂಧಿಕರ ಖಾತೆಗೆ ನೇರವಾಗಿ ಹಣ ಹೋಗುತ್ತದೆ. ಇಂತಹ ಲೂಟಿಯನ್ನು ನಾನು ಎಂದೂ ಕೇಳಿರಲಿಲ್ಲ. ಈಗ ಕೇಳುತ್ತಿದ್ದೇವೆ. ಆದರೆ, ಜನರಿಗೆ ಈ ಮಾದರಿಯ ದರೋಡೆಯ ಸ್ವರೂಪದ ಅರಿವು ಇಲ್ಲ ಎಂದರು.
ಗೋಡೆಗೆ ಮಹಾತ್ಮ ಗಾಂಧಿಯ ಫೋಟೊಗಳನ್ನು ಹಾಕಿಕೊಂಡು ಭ್ರಷ್ಟಾಚಾರ ಮಾಡಲಾಗುತ್ತದೆ. ಗಾಂಧಿ ಫೋಟೋಗಳು ಹೆಚ್ಚಾಗಿ ಕಾಣಿಸುತ್ತಿವೆ ಎಂದರೆ ಅಲ್ಲಿ ದರೋಡೆಕೋರರು ಇದ್ದಾರೆ ಎಂದು ಭಾವಿಸುವ ಪರಿಸ್ಥಿತಿ ಇದೆ. ರಾಜ್ಯ ಮತ್ತು ಕೇಂದ್ರದಲ್ಲಿ ಯಾವ ರೀತಿಯ ಆಡಳಿತ ನೀಡಲಾಗುತ್ತಿದೆ? ಏನಾಗುತ್ತಿದೆ? ಎಂಬುದು ಎಲ್ಲರಿಗೂ ಗೊತ್ತಿದೆ. ಅಪಾಯಕಾರಿ ಸಮಾಜವನ್ನು ನಾವು ನೋಡುತ್ತಿದ್ದೇವೆ. ಆದರೆ, ಗಾಂಧೀಜಿಯವರ ತತ್ವಗಳಿಂದ ಸಮಾಜದಲ್ಲಿ ಕ್ರಾಂತಿಯನ್ನು ಮಾಡಿ ಬದಲಾವಣೆ ತರಬೇಕು ಎಂದು ಸಚಿವರು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ದೊಡ್ಡ ಚಳವಳಿಯೇನೋ ಆರಂಭವಾಯ್ತು. ಆದರೆ, ತಕ್ಷಣ ಸತ್ತು ಹೋಯ್ತು. ಇಂದು ಕೆಟ್ಟ ವ್ಯವಸ್ಥೆ ಇದೆ. ಒಂದು ರಾಜಕೀಯ ಪಕ್ಷಕ್ಕೆ 6,000 ಕೋಟಿ ರು. ದೇಣಿಗೆ ನೀಡಿರುವ ವಿಚಾರವನ್ನು ನ್ಯಾಯಾಂಗವೇ ಬಹಿರಂಗಪಡಿಸಿತು. ಅದಕ್ಕಾಗಿ ನ್ಯಾಯಾಂಗಕ್ಕೆ ಧನ್ಯವಾದಗಳು. ಆದರೆ, ಅದೇ ನ್ಯಾಯಾಲಯ ಮತ್ತೊಂದು ದಿನ ‘ಆಗಿದ್ದು, ಆಗಿದೆ ಬಿಡಿ’ ಎನ್ನುವಂತೆ ಸುಮ್ಮನಾಯಿತು. ಇದು ಹೇಗೆ ಎಂದರೆ, ‘ಮರ್ಡರ್ ಆಗಿದೆ. ಕೊಲೆಯಾದವ ಸತ್ತು ಹೋದ. ಹೋಗಲಿ ಬಿಡಿ’ ಎಂಬಂತಾಗಿದೆ. ನ್ಯಾಯಾಂಗದಲ್ಲಿ, ಆಡಳಿತದಲ್ಲಿ ಲೋಪಗಳು ಆಗುತ್ತಿವೆ. ಈ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ, ನ್ಯಾಯ, ಸತ್ಯ, ಹೋರಾಟ, ಪ್ರತಿಭಟನೆಗಳಿಗೆ ಪ್ರತಿರೂಪ ಎನಿಸಿರುವ ಸತ್ಯಾಗ್ರಹವನ್ನು ದೇಶದಿಂದ ಕಿತ್ತೊಗೆಯುವ ಪ್ರಯತ್ನವನ್ನು ನೂತನ ಕಾನೂನು ಭಾರತೀಯ ನ್ಯಾಯ ಸಂಹಿತೆ ಮೂಲಕ ಮಾಡಲಾಗಿದೆ. ಅಮರಣಾಂತ ಉಪವಾಸ ಮಾಡುತ್ತೇನೆ ಎಂದು ಯಾರಾದರೂ ಹೇಳಿದರೆ ಅವರನ್ನು ಆತ್ಮಹತ್ಯೆ ಯತ್ನ ಕೇಸಿನಲ್ಲಿ ಬಂಧಿಸಿ ಕರೆದೊಯ್ಯುವ ಅವಕಾಶವನ್ನು ಕಲ್ಪಿಸಲಾಗಿದೆ. ಇದರ ವಿರುದ್ಧ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯವೂ ಧ್ವನಿ ಎತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಇಂದಿನ ಸಮಾಜದಲ್ಲಿ ಮೌಲ್ಯಗಳು ಕಾಣೆಯಾಗಿವೆ. ಹಣ, ಅಧಿಕಾರ, ಹಣಗಳಿಸುವ ಅತಿ ಆಸೆಯ ಹಿಂದೆ ಬಿದ್ದಿದ್ದಾರೆ. ನ್ಯಾಯ ಮಾರ್ಗದಲ್ಲಿ ಹಣ ಗಳಿಸುವುದು ತಪ್ಪಲ್ಲ. ಆದರೆ, ಮತ್ತೊಬ್ಬರ ಜೇಬು ಹೊಡೆದು, ಕನ್ನ ಹಾಕಿ ಹಣ ಮಾಡುವುದು ತಪ್ಪು. ಹೀಗಾಗಿ, ನಮ್ಮ ಮಕ್ಕಳಿಗೆ, ಯುವ ಜನತೆಗೆ ನೈತಿಕ ಮೌಲ್ಯಗಳನ್ನು ನೀಡಬೇಕು. ಮೌಲ್ಯದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು. ಗಾಂಧಿ ಸ್ಮಾರಕ ನಿಧಿಯ ಸಂಜಯ್ ಸಿಂಗಾ, ರಾಮಚಂದ್ರ ರಾಹಿ, ಡಾ. ವೊಡೇ ಪಿ. ಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.