ಎಲ್‌ನಿನೋ ಪರಿಣಾಮ ಕೈಕೊಟ್ಟು ದೇಶದ ರೈತರನ್ನು ಸಂಕಷ್ಟಕ್ಕೆ ನೂಕಿರುವ ಮುಂಗಾರು ಮಳೆ ದೇಶದಲ್ಲಿ ಸಂಪೂರ್ಣ ಹಿಂತೆಗೆತ ಆಗಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಶೇ.12.6ರಷ್ಟು ಕಡಿಮೆ ಸುರಿದಿದೆ.

ನವದೆಹಲಿ: ಎಲ್‌ನಿನೋ ಪರಿಣಾಮ ಕೈಕೊಟ್ಟು ದೇಶದ ರೈತರನ್ನು ಸಂಕಷ್ಟಕ್ಕೆ ನೂಕಿರುವ ಮುಂಗಾರು ಮಳೆ ದೇಶದಲ್ಲಿ ಸಂಪೂರ್ಣ ಹಿಂತೆಗೆತ ಆಗಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಶೇ.12.6ರಷ್ಟು ಕಡಿಮೆ ಸುರಿದಿದೆ. ಒಟ್ಟು 759.4 ಮಿ.ಮೀ.ನಷ್ಟು ಮಳೆ ಸುರಿದಿದ್ದು, ವಾಡಿಕೆಯ ಮಳೆ 868.6 ಮಿ.ಮೀ.ಆಗಿದೆ.

ಹಿಂಗಾರು ಮಾರುತ ಅಧಿಕೃತವಾಗಿ ಪ್ರವೇಶಿಸಿದೆ

ಇದೇ ವೇಳೆ, ಕರ್ನಾಟಕ ಸೇರಿ ದಕ್ಷಿಣ ಭಾರತದ ಕೆಲವೆಡೆ ಹಿಂಗಾರು ಮಾರುತ ಅಧಿಕೃತವಾಗಿ ಪ್ರವೇಶಿಸಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ, ಕರೈಕಾಲ್‌, ಆಂಧ್ರ ಕರಾವಳಿ, ರಾಯಲ್‌ ಸೀಮಾದಲ್ಲಿ ಹಿಂಗಾರು ಮಳೆ ಸುರಿಯಲಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಮುಂಗಾರು

ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಮುಂಗಾರು ಮಾರುತ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗೆ ಹಿಂಗಾರು ಮಾರುತದ ಪ್ರಭಾವ ಇರುತ್ತದೆ. ಈಗಾಗಲೇ ಕರ್ನಾಟಕ ಸೇರಿ ದಕ್ಷಿಣ ಭಾರತದ ಬಹುತೇಕ ಕಡೆ ಮುಂಗಾರು ಮಾರುತ ಕೈಕೊಟ್ಟಿದ್ದು, ಹಿಂಗಾರು ಮಾರುತವಾದರೂ ಕೈಹಿಡಿಯಬಹುದೇ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಹಿಂಗಾರು ಮಾರುತವು ದಕ್ಷಿಣ ಭಾರತದ ಎರಡನೇ ಬೆಳೆಗೆ ಅತ್ಯಗತ್ಯವಾಗಿದೆ.