ಸಾರಾಂಶ
ನವದೆಹಲಿ: ಸುಮಾರು ಒಂದು ತಿಂಗಳಷ್ಟು ಸುದೀರ್ಘ ಕಾಲ ನಡೆದ ಸಂಸತ್ತಿನ ಮಳೆಗಾಲದ ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಒಟ್ಟು 21 ದಿನಗಳ ಕಾಲ ನಡೆದ ಕಲಾಪದಲ್ಲಿ ಆನ್‌ಲೈನ್ ಗೇಮ್‌ಗಳಿಗೆ ಕಡಿವಾಣ ಹಾಕುವ ವಿಧೇಯಕ ಸೇರಿ ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ 14 ವಿಧೇಯಕಗಳಿಗೆ ಅನುಮೋದನೆ ಪಡೆಯಲಾಯಿತು.
ಜು.21ರಂದು ಆರಂಭವಾದ ಈ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಒಟ್ಟು 120 ಗಂಟೆ ಕಾಲ ವಿವಿಧ ವಿಚಾರಗಳ ಕುರಿತು ಚರ್ಚೆಗೆ ನಿರ್ಧಾರವಾಗಿತ್ತಾದರೂ ಕೊನೆಗೆ ಕೇವಲ 37.7 ಗಂಟೆಯಷ್ಟೇ ಸುಗಮ ಕಲಾಪ ಸಾಧ್ಯವಾಯಿತು. ಉಳಿದ 84 ಗಂಟೆಯ ಕಲಾಪ ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆಗಳಿಂದಾಗಿ ಯಾವುದೇ ಚರ್ಚೆಯಿಲ್ಲದೆ ವ್ಯರ್ಥವಾಯಿತು. ಒಟ್ಟಾರೆ ಕಲಾಪದ ಉತ್ಪಾದಕತೆ ಶೇ.31.41ರಷ್ಟೇ ಇತ್ತು.
ಲೋಕಸಭೆಗೆ ಹೋಲಿಸಿದರೆ ರಾಜ್ಯಸಭೆಯಲ್ಲಿ ಸುಮಾರು ಮೂರು ಗಂಟೆಯಷ್ಟು ಹೆಚ್ಚು ಕಾಲ ಸುಗಮ ಕಲಾಪ ನಡೆಯಿತು. ಒಟ್ಟು 41.15 ಗಂಟೆ ಕಾಲ ಮಹತ್ವದ ವಿಧೇಯಕಗಳು ಹಾಗೂ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆದು, ಒಟ್ಟಾರೆ ಕಲಾಪದ ಉತ್ಪಾದಕತೆ ಶೇ.38.88ರಷ್ಟಿತ್ತು.
ಮತಪಟ್ಟಿ ಪರಿಷ್ಕರಣೆಗೆ ಬಲಿ:
ಅಧಿವೇಶನದ ಆರಂಭದಿಂದಲೂ ಪ್ರತಿಪಕ್ಷಗಳು ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ ವಿಚಾರ ಮುಂದಿಟ್ಟುಕೊಂಡು ತೀವ್ರ ಗದ್ದಲ ನಡೆಸುವ ಮೂಲಕ ಉಭಯ ಸದನಗಳಲ್ಲಿ ಸುಗಮ ಕಲಾಪಕ್ಕೆ ಅಡ್ಡಿ ಮಾಡಿದವು. ಇನ್ನು ಗಂಭೀರ ಅಪರಾಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುವ ಪ್ರಧಾನಿ, ಮುಖ್ಯಮಂತ್ರಿ, ಸಚಿವರ ವಜಾಗೆ ಅವಕಾಶ ನೀಡುವ ವಿಧೇಯಕ ಮಂಡಿಸಿದ ವೇಳೆ ಲೋಕಸಭೆಯಲ್ಲಿ ತೀವ್ರ ಕೋಲಾಹಲವೇ ಸೃಷ್ಟಿಯಾಗಿತ್ತು. ಒಂದು ಹಂತದಲ್ಲಿ ಪ್ರತಿಪಕ್ಷಗಳ ಸಂಸದರು ವಿಧೇಯಕದ ಪ್ರತಿ ಹರಿದು ಶಾ ಅವರತ್ತ ಎಸೆದ ಪ್ರಸಂಗವೂ ನಡೆಯಿತು. ಇದರ ಹೊರತಾಗಿಯೂ ಆರಂಭದಲ್ಲಿ ಆಪರೇಷನ್ ಸಿಂದೂರದ ಕುರಿತು ಅಧಿವೇಶನದಲ್ಲಿ ಉತ್ತಮ ಚರ್ಚೆ ನಡೆಯಿತು.
ಅಧಿವೇಶನದ ಮುಕ್ತಾಯದ ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಈ ಅಧಿವೇಶನವು ದೇಶ ಮತ್ತು ಸರ್ಕಾರದ ಪಾಲಿಗೆ ಯಶಸ್ವಿಯಾಗಿದೆ. ಆದರೆ, ಪ್ರತಿಪಕ್ಷಗಳ ಪಾಲಿಗೆ ಸೋಲಾಗಿದೆ ಎಂದು ಹೇಳಿದರು.