ಕೈಕೊಟ್ಟ ಮಿತ್ರಪಕ್ಷಗಳಿಂದ ಅನಿವಾರ್ಯ ಏಕಾಂಗಿ ಸ್ಪರ್ಧೆಯಿಂದಲೇ ಕಾಂಗ್ರೆಸ್‌ಗೆ ಹಿನ್ನಡೆ

| N/A | Published : Feb 09 2025, 01:18 AM IST / Updated: Feb 09 2025, 05:02 AM IST

ಸಾರಾಂಶ

ಕೈಕೊಟ್ಟ ಮಿತ್ರಪಕ್ಷಗಳಿಂದಾಗಿ ಅನಿವಾರ್ಯ ಏಕಾಂಗಿ ಸ್ಪರ್ಧೆ, ಮೂರನೇ ಬಾರಿಯೂ ಕೈಹಿಡಿಯದ ಸಾಂಪ್ರದಾಯಿಕ ಮತಬ್ಯಾಂಕ್‌ನಿಂದಾಗಿ ಉತ್ತಮ ಸಾಧನೆಯ ನಿರೀಕ್ಷೆ ಹೊರತಾಗಿಯೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸತತ ಮೂರನೇ ಬಾರಿ ಶೂನ್ಯ ಸಂಪಾದನೆ ಮಾಡಬೇಕಾಯಿತು.

ನವದೆಹಲಿ: ಕೈಕೊಟ್ಟ ಮಿತ್ರಪಕ್ಷಗಳಿಂದಾಗಿ ಅನಿವಾರ್ಯ ಏಕಾಂಗಿ ಸ್ಪರ್ಧೆ, ಮೂರನೇ ಬಾರಿಯೂ ಕೈಹಿಡಿಯದ ಸಾಂಪ್ರದಾಯಿಕ ಮತಬ್ಯಾಂಕ್‌ನಿಂದಾಗಿ ಉತ್ತಮ ಸಾಧನೆಯ ನಿರೀಕ್ಷೆ ಹೊರತಾಗಿಯೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸತತ ಮೂರನೇ ಬಾರಿ ಶೂನ್ಯ ಸಂಪಾದನೆ ಮಾಡಬೇಕಾಯಿತು.

ಆಮ್‌ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಇಂಡಿಯಾ ಒಕ್ಕೂಟವಾದ ಟಿಎಂಸಿ, ಸಮಾಜವಾದಿ ಪಕ್ಷಗಳು ಆಪ್‌ ಅನ್ನು ಬೆಂಬಲಿಸಲು ನಿರ್ಧರಿಸಿದ್ದರಿಂದ ಕಾಂಗ್ರೆಸ್‌ ಸ್ವತಂತ್ರವಾಗಿ ಸ್ಪರ್ಧಿಸುವುದು ಅನಿವಾರ್ಯವಾಯಿತು. ರಾಷ್ಟ್ರೀಯಮಟ್ಟದಲ್ಲಿ ಬಿಜೆಪಿ ವಿರುದ್ಧ ಒಂದಾಗಿದ್ದ ಇಂಡಿಯಾ ಬ್ಲಾಕ್‌ ಪಕ್ಷಗಳೇ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಾಗ್ದಾಳಿಗಿಳಿಯಬೇಕಾಯಿತು.

ಇನ್ನು ಕಾಂಗ್ರೆಸ್‌ನ ಬಹುದೊಡ್ಡ ವೋಟ್‌ಬ್ಯಾಂಕ್‌ ಆದ ಮುಸ್ಲಿಮರು ಮತ್ತು ದಲಿತರು ಆಪ್‌ ಜತೆಗೇ ನಿಂತರು. ಈ ಚುನಾವಣೆಯಲ್ಲಿ ಆಪ್‌ ಗೆದ್ದಿರುವ 22 ಸ್ಥಾನಗಳಲ್ಲಿ 14ರಲ್ಲಿ ಮುಸ್ಲಿಮರು ಮತ್ತು ದಲಿತರೇ ನಿರ್ಣಾಯಕರು. ಸಾಕಷ್ಟು ಪ್ರಯತ್ನದ ಹೊರತಾಗಿಯೂ ಈ ಮತ ಬ್ಯಾಂಕ್‌ ಸೆಳೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಒಂದರಿಂದ ಒಂದೂವರೆ ಪರ್ಸೆಂಟ್‌ನಷ್ಟು ಮತಗಳನ್ನಷ್ಟೇ ಹೆಚ್ಚಿಸಿಕೊಳ್ಳುವುದು ಸಾಧ್ಯವಾಯಿತು. ಆಪ್‌ ವಿರುದ್ಧ ಇದ್ದ ದೊಡ್ಡಪ್ರಮಾಣದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲೂ ಕಾಂಗ್ರೆಸ್‌ ವಿಫಲವಾಯಿತು. ಮುಖ್ಯವಾಗಿ ಮಧ್ಯಮ ಮತ್ತು ಬಡ ವರ್ಗದವರನ್ನು ಸೆಳೆಯಲು ಕರ್ನಾಟಕದ ರೀತಿಯೇ ಯುವತಿಯರಿಗೆ ಪ್ರತಿತಿಂಗಳು 2,500, ನಿರುದ್ಯೋಗಿ ಯುವಕರಿಗೆ ಒಂದು ವರ್ಷ ಪ್ರತಿ ತಿಂಗಳು 8,500 ರು. ನೀಡುವಂಥ ಗ್ಯಾರಂಟಿಗಳನ್ನು ಘೋಷಣೆ ಮತದಾರರ ಸೆಳೆಯಲಿಲ್ಲ. ಬಿಜೆಪಿ ಆಪ್‌ ಸರ್ಕಾರದ ಉಚಿತಗಳನ್ನು ಮುಂದುವರಿಸಿಕೊಂಡು ಮತ್ತೊಂದಿಷ್ಟು ಹೊಸ ಉಚಿತಗಳನ್ನು ಘೋಷಿಸಿ ಡಬಲ್ ಎಂಜಿನ್‌ ಸರ್ಕಾರದ ಭರವಸೆ ನೀಡಿದ್ದು ಕಾಂಗ್ರೆಸ್‌ಗೆ ಮುಳುವಾಯಿತು.

ಕಾಂಗ್ರೆಸ್‌ನಿಂದ ಹೀನಾಯ ಪ್ರದರ್ಶನ ಯಾಕೆ?

1 ಇಂಡಿಯಾ ಒಕ್ಕೂಟದ ಮಿತ್ರರು ಕೈಕೊಟ್ಟ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದು.

2 ಮುಸ್ಲಿಂ, ದಲಿತ ಮತಬ್ಯಾಂಕ್‌ ಈ ಸಲವೂ ಕಾಂಗ್ರೆಸ್‌ ಬದಲು ಆಪ್‌ ಬೆಂಬಲಿಸಿದ್ದು

3 ಆಪ್‌ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಲಾ‍ಭ ಪಡೆಯಲು ವಿಫಲವಾಗಿದ್ದು

4 ಕರ್ನಾಟಕದ ರೀತಿಯ ಗ್ಯಾರಂಟಿ ಸ್ಕೀಂಗಳು ಮತದಾರರನ್ನು ಸೆಳೆಯದೇ ಹೋಗಿದ್ದು.

5 ಬಿಜೆಪಿ- ಆಪ್‌ ಅಬ್ಬರಕ್ಕೆ ಸರಿಹೊಂದುವ ತಂತ್ರಗಾರಿಕೆ ರೂಪಿಸುವಲ್ಲಿ ವೈಫಲ್ಯ ಕಂಡಿದ್ದು.