ಸಾರಾಂಶ
ಸಿಂಗಾಪುರ: ‘ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ 6 ರಫೇಲ್ ಯುದ್ಧವಿಮಾನಗಳನ್ನು ನಾವು ಹೊಡೆದುರುಳಿಸಿದ್ದೆವು’ ಎಂಬ ಪಾಕಿಸ್ತಾನದ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. ಯುದ್ಧದ ವೇಳೆ ಸಣ್ಣಪುಟ್ಟ ನಷ್ಟ ಸಾಮಾನ್ಯ. ಅದನ್ನು ತಿದ್ದಿಕೊಂಡು ನಂತರ ಮತ್ತೆ ದಾಳಿ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
ಭಾರತದ 6 ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿತ್ತು. ಇದನ್ನು ಸಿಂಗಾಪುರ ಪ್ರವಾಸದ ವೇಳೆ ಸಂದರ್ಶನ ನೀಡಿದ ಜ। ಚೌಹಾಣ್ ಅವರಿಗೆ ಬ್ಲೂಂಬರ್ಗ್ ಸುದ್ದಿಸಂಸ್ಥೆಯು ‘ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಭಾರತದ ಎಷ್ಟು ಯುದ್ಧವಿಮಾನಗಳು ನಷ್ಟವಾಗಿವೆ’ ಎಂದು ಕೇಳಿತ್ತು. ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ ಜ. ಅನಿಲ್ ಚೌಹಾಣ್, ‘ನಮ್ಮ ಯುದ್ಧವಿಮಾನ ನಷ್ಟವಾಗಿದೆ ಎಂಬುದಕ್ಕಿಂತ ಆ ರೀತಿ ಯಾಕಾಯ್ತು ಎಂಬ ಉತ್ತರ ಹುಡುಕುವುದು ನಮಗೆ ಮುಖ್ಯ. ಈ ಮೂಲಕ ಮುಂದಿನ ದಿನಗಳಲ್ಲಿ ನಾವು ನಮ್ಮ ತಂತ್ರಗಾರಿಕೆಯನ್ನು ಸುಧಾರಿಸಿಕೊಂಡು ದಾಳಿ ನಡೆಸಬಹುದು’ ಎಂದರು.
‘ಈ ದೃಷ್ಟಿಯಿಂದ ಹೇಳುವುದಾದರೆ ತಂತ್ರಗಾರಿಕೆಯಲ್ಲಾದ ಎಡವಟ್ಟಿನ ಅರಿವು ನಮಗೆ ಆಗಿದೆ. ನಮ್ಮ ತಪ್ಪು ಅರ್ಥಮಾಡಿಕೊಂಡು, ತಿದ್ದಿಕೊಂಡು 2 ದಿನಗಳ ಬಳಿಕ ಅವರ ಮತ್ತೆ ದಾಳಿ ನಡೆಸಿದೆವು. ನಾವು ನಮ್ಮ ಎಲ್ಲ ಯುದ್ಧವಿಮಾನಗಳನ್ನು ದೂರದಲ್ಲಿರಿಸಿಕೊಂಡೇ ಗುರಿ ಮೇಲೆ ನಿಖರ ದಾಳಿ ನಡೆಸಿದೆವು’ ಎಂದರು.
ಅಧಿವೇಶನಕ್ಕೆ ಆಗ್ರಹ:
ಈ ನಡುವೆ, ಅನಿಲ್ ಚೌಹಾಣ್ ಹೇಳಿಕೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಕಾಕಿದೆ. ಈ ಬಗ್ಗೆ ಉತ್ತರಕ್ಕೆ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಅಲ್ಲಿ ಚರ್ಚಿಸುವುದು ಅಗತ್ಯ. ಜತೆಗೆ ದೇಶದ ಯುದ್ಧ ಸನ್ನದ್ಧತೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ‘ನಮ್ಮ ಎಷ್ಟು ಯುದ್ಧವಿಮಾನಗಳು ನಷ್ಟ ಆಗಿವೆ ಎಂದು ದೇಶ ತಿಳಿಯಬಯಸುತ್ತಿದೆ. ಸರ್ಕಾರ ಪಾರದರ್ಶಕವಾಗಿರಬೇಕು, ಉತ್ತರದಾಯಿತ್ವವು ಪ್ರಜಾಪ್ರಭುತ್ವದ ಭಾಗ. ನಾವು ನಮ್ಮ ಸೇನಾಪಡೆಗಳನ್ನು ಗೌರವಿಸುತ್ತೇವೆ. ಇಲ್ಲಿ ದೇಶಪ್ರೇಮದ ಪ್ರಶ್ನೆ ಬರುವುದಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ಇತರರಿಗಿಂತ ಹೆಚ್ಚು ದೇಶಪ್ರೇಮಿ. ನಮ್ಮನ್ನು ಪ್ರಶ್ನಿಸುವವರಿಗಿಂತ ನಮ್ಮ ಗಾಂಧಿ ಕುಟುಂಬವು ಈ ದೇಶದ ಸಮಗ್ರತೆಗಾಗಿ ಸಾಕಷ್ಟು ತ್ಯಾಗ, ಬಲಿದಾನ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಉತ್ತಮ ಕುಮಾರ್ ರೆಡ್ಡಿ ಹೇಳಿದ್ದಾರೆ.
ಚೀನಾ ಶಸ್ತ್ರಾಸ್ತ್ರ ಕೆಲಸ ಮಾಡಲಿಲ್ಲ: ಚೌಹಾಣ್
ಸಿಂಗಾಪುರ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನವು ನಿಯೋಜಿಸಿದ್ದ ಚೀನಾ ಮತ್ತು ಇತರೆ ದೇಶಗಳ ರಕ್ಷಣಾ ವ್ಯವಸ್ಥೆಗಳು ಕೆಲಸ ಮಾಡಲಿಲ್ಲ ಎಂದು ಇದೇ ವೇಳೆ ಸೇನಾಪಡೆಗಳ ಮುಖ್ಯಸ್ಥ ಜ. ಅನಿಲ್ ಚೌಹಾಣ್ ತಿಳಿಸಿದರು. ನಾವು ಪಾಕಿಸ್ತಾನದ 300 ಕಿ.ಮೀ. ವ್ಯಾಪ್ತಿಯ ಗುರಿಗಳ ಮೇಲೆ ದಾಳಿ ನಡೆಸಿದೆವು. ಈ ಪ್ರದೇಶಗಳು ಸುರಕ್ಷಿತವಾಗಿತ್ತು, ಸಾಕಷ್ಟು ವಾಯುರಕ್ಷಣಾ ವ್ಯವಸ್ಥೆಯನ್ನೂ ಹೊಂದಿತ್ತು. ಆದರೂ ನಾವು ನಿಖರ ದಾಳಿ ನಡೆಸಿದೆವು ಎಂದು ಹೇಳಿದರು.
ಇದಕ್ಕೂ ಮೊದಲು ಶಾಂಘ್ರಿಲಾ ಡೈಲಾಗ್ ಕಾರ್ಯಕ್ರಮದಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ಪಾಕ್ ಮೇಲಿನ ದಾಳಿ ವೇಳೆ ನಾವು ಆಕಾಶ್‌ನಂಥ ಸ್ವದೇಶಿ ನಿರ್ಮಿತ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿದ್ದಷ್ಟೇ ಅಲ್ಲದೆ, ವಾಯುರಕ್ಷಣಾ ವ್ಯವಸ್ಥೆಗಾಗಿ ವಿದೇಶಗಳ ಮೇಲೆ ಅವಲಂಬಿತವಾಗುವ ಬದಲು ನಮ್ಮದೇ ಆದ ಮೂಲಸೌಲಭ್ಯಗಳ ಜಾಲವನ್ನು ನಿರ್ಮಿಸಿದ್ದೆವು. ನಾವು ನಮ್ಮ ರೇಡಾರ್‌ಗಳನ್ನು ದೇಶಾದ್ಯಂತ ವಿವಿಧ ಮೂಲಗಳಿಂದ ಜೋಡಿಸಿದ್ದೆವು. ಇದು ಶತ್ರುದಾಳಿಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು ಎಂದರು.
ಚೌಹಾಣ್ ಹೇಳಿದ್ದೇನು?
- ಆಪರೇಶನ್ ಸಿಂದೂರ ವೇಳೆ 4 ರಫೇಲ್ ಹೊಡೆದಿದ್ದಾಗಿ ಹೇಳಿದ್ದ ಪಾಕ್
- ಇದು ಸುಳ್ಳು ಎಂದು ತಳ್ಳಿಹಾಕಿದ ಭಾರತದ ಸಶಸ್ತ್ರಪಡೆಗಳ ಮುಖ್ಯಸ್ಥ
- ಅಲ್ಪ ನಷ್ಟವಾಗಿದೆ, ಆದರೆ ಏಕಾಯ್ತು ಎಂಬುದನ್ನು ಅರಿಯುವುದು ಮುಖ್ಯ
- ಸಮರ ತಂತ್ರಗಾರಿಕೆಯಲ್ಲಿನ ಕೆಲ ದೋಷಗಳಿಂದ ನಮಗೆ ನಷ್ಟವಾಗಿತ್ತು
- ನಾವು ನಮ್ಮ ತಪ್ಪು ತಿದ್ದಿಕೊಂಡು 2 ದಿನ ಬಳಿಕ ಮತ್ತೆ ದಾಳಿ ನಡೆಸಿದೆವು
- ವಿಮಾನ ನಷ್ಟ ಬಗ್ಗೆ ಸೇನಾಪಡೆಗಳ ಮುಖ್ಯಸ್ಥ ಜ.ಅನಿಲ್ ಚೌಹಾಣ್ ಸ್ಪಷ್ಟನೆ
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))