ಗ್ರಾಮೀಣ ಬ್ಯಾಂಕ್ ಹಾಗೂ ಕಿರುಸಾಲ ಯೋಜನೆ ಜಾರಿಗೆ ತಂದಿದ್ದಕ್ಕೆ ನೊಬೆಲ್ ಪ್ರಶಸ್ತಿಗೆ ಭಾಜನರಾದ ಬಾಂಗ್ಲಾ ಮಧ್ಯಂತರ ಸರ್ಕಾರ ಮುಖ್ಯಸ್ಥ ಮೊಹಮ್ಮದ್ ಯೂನಸ್ ವಿಶ್ವವಿದ್ಯಾಲಯವೊಂದರ ಯೋಜನೆ ಕದ್ದು, ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡು ಪ್ರಶಸ್ತಿಯನ್ನು ಹೊಡೆದುಕೊಂಡರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಢಾಕಾ: ಗ್ರಾಮೀಣ ಬ್ಯಾಂಕ್ ಹಾಗೂ ಕಿರುಸಾಲ ಯೋಜನೆ ಜಾರಿಗೆ ತಂದಿದ್ದಕ್ಕೆ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ವಿಶ್ವವಿದ್ಯಾಲಯವೊಂದರ ಯೋಜನೆಯನ್ನು ಕದ್ದು, ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡು ಪ್ರಶಸ್ತಿಯನ್ನು ಹೊಡೆದುಕೊಂಡರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಹಸ್ಯ ದಾಖಲೆಗಳನ್ನು ಬಿಡುಗಡೆ
ಬಾಂಗ್ಲಾ ಮಾಜಿ ಗುಪ್ತಚರ ಅಧಿಕಾರಿ ಅಮಿನುಲ್ ಹಕ್ ಪೊಲಾಶ್ ಅವರು 1976-1983ರ ನಡುವಿನ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿ ಈ ಆರೋಪ ಮಾಡಿದ್ದಾರೆ.
ಮೊದಲ ಪ್ರಯೋಗ 1976ರಲ್ಲಿ ವಿವಿಯ ಗ್ರಾಮೀಣ ಆರ್ಥಿಕತೆ ಯೋಜನೆಯ ಅಡಿಯಲ್ಲಿ ಆರಂಭ
ಮೈಕ್ರೋಕ್ರೆಡಿಟ್‌ನ ಮೊದಲ ಪ್ರಯೋಗ 1976ರಲ್ಲಿ ಚಿತ್ತಗಾಂಗ್ ವಿವಿಯ ಗ್ರಾಮೀಣ ಆರ್ಥಿಕತೆ ಯೋಜನೆಯ ಅಡಿಯಲ್ಲಿ ಆರಂಭವಾಯಿತು. ಜೋಬ್ರಾ ಗ್ರಾಮದಲ್ಲಿ ಮೊದಲ ಸಣ್ಣ ಸಾಲಗಳನ್ನು ಕೊಟ್ಟದ್ದು ಯೂನಸ್ ಅಲ್ಲ, ಅವರ ಕಿರಿಯ ಸಂಶೋಧಕರಾದ ಸ್ವಪನ್ ಅದ್ನಾನ್, ನಾಸಿರುದ್ದೀನ್, ಎಚ್.ಐ. ಲತೀಫೀ ಮತ್ತು ಇತರರು. ಯೂನಸ್ ಆಗ ಕೇವಲ ಟ್ಯೂಬ್‌ವೆಲ್ ಸಹಕಾರ ಸಂಘಗಳನ್ನು ನೋಡಿಕೊಳ್ಳುತ್ತಿದ್ದರು. 1978ರಲ್ಲೇ ಬಾಂಗ್ಲಾದೇಶ ಬ್ಯಾಂಕ್ ಈ ಮಾದರಿಯನ್ನು ‘ಗ್ರಾಮೀಣ ಬ್ಯಾಂಕ್ ಯೋಜನೆ’ ಎಂದು ದೇಶಾದ್ಯಂತ ಜಾರಿಗೊಳಿಸಿತು. 1983ರಲ್ಲಿ ಯೂನಸ್ ಅವರನ್ನು ಯೋಜನೆಯ ನಿರ್ದೇಶಕರನ್ನಾಗಿ ಮಾಡಲಾಯಿತು. ಅಲ್ಲಿಂದ ಅವರು ಪೂರ್ತಿ ಕ್ರೆಡಿಟ್ ತಮ್ಮ ಹೆಸರಿಗೆ ತೆಗೆದುಕೊಂಡು, ‘ಮೈಕ್ರೋಕ್ರೆಡಿಟ್ ಸ್ಥಾಪಕ’ನೆನಿಸಿ ನೊಬೆಲ್ ಪ್ರಶಸ್ತಿ (2006) ಪಡೆದರು ಎಂದು ಆರೋಪಿಸಿದ್ದಾರೆ.
