ಸಾರಾಂಶ
ಅನೇಕ ಉದ್ಯಮಗಳನ್ನು ನಡೆಸುತ್ತಿರುವ ಅವುಗಳ ಒಡೆಯ, ಅಮೆರಿಕದ ಅಧಕ್ಷ ಡೊನಾಲ್ಡ್ ಟ್ರಂಪ್‌ರ ಆಪ್ತ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರ ಆಸ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗುತ್ತಿದೆ. ಕಳೆದ ಕೆಲ ವಾರಗಳಲ್ಲಿ ಮಸ್ಕ್ ಬರೋಬ್ಬರಿ 10.47 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ.
ವಾಷಿಂಗ್ಟನ್: ಬಾಹ್ಯಾಕಾಶ, ಸಾಮಾಜಿಕ ಜಾಲತಾಣ, ಇಲೆಕ್ಟ್ರಿಕ್ ಕಾರು ಸೇರಿ ಅನೇಕ ಉದ್ಯಮಗಳನ್ನು ನಡೆಸುತ್ತಿರುವ ಅವುಗಳ ಒಡೆಯ, ಅಮೆರಿಕದ ಅಧಕ್ಷ ಡೊನಾಲ್ಡ್ ಟ್ರಂಪ್‌ರ ಆಪ್ತ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರ ಆಸ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗುತ್ತಿದೆ. ಕಳೆದ ಕೆಲ ವಾರಗಳಲ್ಲಿ ಮಸ್ಕ್ ಬರೋಬ್ಬರಿ 10.47 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ. ವರದಿಯೊಂದರ ಪ್ರಕಾರ, 2025ರ ಆರಂಭದಿಂದ ಮಸ್ಕ್‌ರ ಆಸ್ತಿಯಲ್ಲಿ ಶೇ.25ರಷ್ಟು ಇಳಿಕೆಯಾಗಿದೆ. ಆದರೂ, 28.81 ಲಕ್ಷ ಕೋಟಿ ರು. ಹೊಂದುವ ಮೂಲಕ ‘ಅತಿ ಶ್ರೀಮಂತ’ ಪಟ್ಟವನ್ನು ಕಾಯ್ದಿರಿಸಿಕೊಂಡಿದ್ದಾರೆ. ಟೆಸ್ಲಾ ಕಾರು ಮಾರಾಟ ಇಳಿಕೆ, ರಾಜಕೀಯ ಪ್ರವೇಶವು ಇಳಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಇದಕ್ಕೆ ಕಾರಣವೇನು?:ಮಸ್ಕ್ ಅವರ ಒಡೆತನದ ಇ-ಕಾರು ಉತ್ಪಾದಕ ಟೆಸ್ಲಾದ ಷೇರು ಮೌಲ್ಯ ಕುಸಿತವು ಆಸ್ತಿ ಇಳಿಕೆಗೆ ಪ್ರಮುಖ ಕಾರಣ. ಕಳೆದೆರಡು ತಿಂಗಳಲ್ಲಿ ಟೆಸ್ಲಾದ ಷೇರು ಮೌಲ್ಯ ಶೇ.35ರಷ್ಟು (34.92 ಲಕ್ಷ ಕೋಟಿ ರು.) ಇಳಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಇ-ಕಾರುಗಳು ಲಭ್ಯವಿರುವ ಕಾರಣ ಟೆಸ್ಲಾದ ಮಾರಾಟ 2024ರ ಡಿಸೆಂಬರ್‌ಗೆ ಹೋಲಿಸಿದರೆ 2025ರ ಜನವರಿಯ ಹೊತ್ತಿಗೆ ಶೇ.16ರಷ್ಟು ಕುಸಿದಿದೆ.
ಇದರೊಂದಿಗೆ, ಮಸ್ಕ್ ಇತ್ತೀಚೆಗೆ ಅಮೆರಿಕ ರಾಜಕೀಯಕ್ಕೆ ಧುಮುಕಿದ್ದಾರೆ. ಟ್ರಂಪ್ ಸರ್ಕಾರದಿಂದ ಸೃಷ್ಟಿಸಲಾಗಿರುವ ದಕ್ಷತೆಯ ಇಲಾಖೆಯ (ಡಾಜ್) ಮುಖ್ಯಸ್ಥರ ಹುದ್ದೆಗೇರಿರುವುದರಿಂದ ಮಸ್ಕ್ ತಮ್ಮ ಉದ್ಯಮಗಳ ಕಡೆ ಎಷ್ಟು ಗಮನ ಹರಿಸಿಯಾರು ಎಂಬ ಪ್ರಶ್ನೆ ಪೇಟೆಗಳಲ್ಲಿ ಉದ್ಭವಿಸಿದೆ. ಹೀಗಾಗಿ ಆಸ್ತಿ ಕರಗಲು ಇದೂ ಒಂದು ಕಾರಣ.