ಸಾರಾಂಶ
27 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿರುವ ಬಿಜೆಪಿ, ಸರ್ಕಾರ ರಚನೆ ಮತ್ತು ತನ್ನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ನವದೆಹಲಿ: 27 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿರುವ ಬಿಜೆಪಿ, ಸರ್ಕಾರ ರಚನೆ ಮತ್ತು ತನ್ನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಭೇಟಿಯಾಗಿ ಹಲವು ಆಯಾಮಗಳಲ್ಲಿ ಮಾತುಕತೆ ನಡೆಸಿದ್ದಾರೆ.
ಈ ಮಾತುಕತೆ ವೇಳೆ ನೂತನ ಸರ್ಕಾರ ರಚನೆಯ ಪ್ರಕ್ರಿಯೆ, ಕಾರ್ಯಕ್ರಮದ ರೂಪರೇಷೆ, ನೂತನ ಮುಖ್ಯಮಂತ್ರಿ ಯಾರಾಗಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಅದರ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರನ್ನು ಭೇಟಿ ಮಾಡಿ, ನೂತನ ಶಾಸಕರ ಭೇಟಿಗೆ ಸಮಯ ಕೋರಿದ್ದಾರೆ.
ಪಕ್ಷದಲ್ಲಿ ಸಿಎಂ ಪಟ್ಟಕ್ಕೆ ಹಲವರ ಹೆಸರುಗಳು ಕೇಳಿಬರುತ್ತಿದ್ದು, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಲುಣಿಸಿದ ಪರ್ವೇಶ್ ವರ್ಮಾ ಅವರ ಹೆಸರು ಮುಂಚೂಣಿಯಲ್ಲಿದೆ. ಜೊತೆಗೆ ಸತೀಶ್ ಉಪಾಧ್ಯಾಯ, ಆಶಿಷ್ ಸೂದ್, ವಿಜೇಂದ್ರ ಗುಪ್ತಾ ಮತ್ತು ಪವನ್ ಶರ್ಮಾ ಅವರ ಹೆಸರುಗಳು ಸಹ ಕೇಳಿಬರುತ್ತಿದೆ.
ಮತ್ತೊಂದೆಡೆ ಈ ಹಿಂದೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಆಯ್ಕೆ ಮಾಡಿದಂತೆ ಹೊಸ ಮುಖವನ್ನು ಪರಿಚಯಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅಥವಾ ಸಿಎಂ ಪಟ್ಟಕ್ಕೆ ಮಹಿಳೆಯರ ಹೆಸರನ್ನು ಸಹ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ರೇಖಾ ಗುಪ್ತಾ ಮತ್ತು ಶಿಖಾ ರಾಯ್ ಹೆಸರು ಇದರಲ್ಲಿದೆ. ಅಥವಾ ಸಂಸದ ಮನೋಜ್ ತಿವಾರಿ ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಅವರನ್ನು ವಿಧಾನಸಭೆಗೆ ತರಬಹುದು ಎನ್ನಲಾಗಿದೆ.
ಮೋದಿ ಅಮೆರಿಕದಿಂದ ಬಂದ ಬಳಿಕ ದೆಹಲಿ ಸರ್ಕಾರ ರಚನೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಅಧಿಕಾರಕ್ಕೆ ಏರಿರುವ ಬಿಜೆಪಿ ಸರ್ಕಾರ ಫೆ.14ರ ಬಳಿಕ ರಚನೆಯಾಗುವ ಸಾಧ್ಯತೆ ಇದೆ.
ಕಾರಣ, ಪ್ರಧಾನಿ ನರೇಂದ್ರ ಮೋದಿ ಫೆ.10ರಿಂದ 4 ದಿನಗಳ ಕಾಲ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿಂದ ಅವರು ಫೆ.14ರಂದು ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಹೀಗಾಗಿ ಅವರು ಮರಳಿದ ಬಳಿಕವೇ ದೆಹಲಿಯಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜಿಸಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆಯೋಜಿಸಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ತನ್ನ ಶಕ್ತಿ ಪ್ರದರ್ಶನದ ಭಾಗವಾಗಿ ಎನ್‌ಡಿಎ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನುಕಾರ್ಯಕ್ರಮಕ್ಕೆ ಆಹ್ವಾನಿಸುವ ಸಾಧ್ಯತೆಯಿದೆ.
ದಿಲ್ಲಿ ಬಳಿಕ ಬಿಹಾರದ 243ರಲ್ಲಿ 225 ಸ್ಥಾನ ಗೆಲ್ಲಲು ಬಿಜೆಪಿ ಚಿತ್ತ
!ನವದೆಹಲಿ: ದೆಹಲಿಯಲ್ಲಿ 27 ವರ್ಷ ಬಳಿಕ ಅಧಿಕಾರದ ಗದ್ದುಗೆಗೆ ಏರಿರುವ ಬಿಜೆಪಿಯ ಚಿತ್ತ ಈಗ ಬಿಹಾರದತ್ತ ವಾಲಿದೆ. 243 ಕ್ಷೇತ್ರಗಳ ಬಿಹಾರದಲ್ಲಿ ಕನಿಷ್ಠ 225 ಸೀಟುಗಳನ್ನು ಬಾಚಿಕೊಳ್ಳಲು ಎನ್‌ಡಿಎ ತಯಾರಿ ನಡೆಸಿದೆ ಎನ್ನಲಾಗಿದೆ. ದೆಹಲಿಯಲ್ಲಿ 48 ಸೀಟುಗಳನ್ನು ಗೆದ್ದು ಜಯ ಸಾಧಿಸಿರುವ ಬಿಜೆಪಿ ಇದೇ ಹುಮ್ಮಸ್ಸು ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆವ ಬಿಹಾರದಲ್ಲಿಯೂ ಮುಂದುವರಿಸಲಿದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟವು, ಆರ್‌ಜೆಡಿ- ಕಾಂಗ್ರೆಸ್ ಜೋಡಿ ಒಳಗೊಂಡ ಇಂಡಿಯಾ ಕೂಟವನ್ನು ಎದುರಿಸಲು ಸಜ್ಜಾಗಿದೆ. ಮತ್ತೊಂದೆಡೆ ಎನ್‌ಡಿಎ ಕೂಟದ ಪ್ರಮುಖ ಪಕ್ಷ ಹಾಮ್‌ನ ನಾಯಕ ಜೀತನ್ ರಾಂ ಮಾಂಝಿ ಮಾತನಾಡಿದ್ದು, ದೆಹಲಿ ಚುನಾವಣೆಯು ಬಿಹಾರದ ಕನ್ನಡಿ. ಅಸಲಿಯದ್ದು ಬಿಹಾರದಲ್ಲಿದೆ’ ಎಂದಿದ್ದಾರೆ.