ಮಹಾರಾಷ್ಟ್ರದ   ಸಂಭಾಜಿನಗರ ಜಿಲ್ಲೆಯಲ್ಲಿರುವ ಮುಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆ ಮತ್ತು ಪ್ರತಿಭಟನೆ ವೇಳೆ ಕುರಾನ್‌ ಸುಡಲಾಗಿದೆ ಎಂದು ಹಬ್ಬಿದ ವದಂತಿಯಿಂದಾಗಿ ಮಹಾರಾಷ್ಟ್ರದಲ್ಲಿ  ಹಿಂಸಾಚಾರ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ 

ನಾಗ್ಪುರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮುಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆ ಮತ್ತು ಪ್ರತಿಭಟನೆ ವೇಳೆ ಕುರಾನ್‌ ಸುಡಲಾಗಿದೆ ಎಂದು ಹಬ್ಬಿದ ವದಂತಿಯಿಂದಾಗಿ ಮಹಾರಾಷ್ಟ್ರದಲ್ಲಿ ಸೋಮವಾರ ಹಿಂಸಾಚಾರ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರ ಬೆನ್ನಲ್ಲೇ ವದಂತಿಗಳಿಗೆ ಕಿವಿಗೊಡಬೇಡಿ, ಶಾಂತಿ ಕಾಪಾಡಿ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಸಮಾಧಿ ತೆರವಿಗೆ ಆಗ್ರಹ:

ಔರಂಗಜೇಬ್‌ ನೋವು ಮತ್ತು ಗುಲಾಮಗಿರಿಯ ಸಂಕೇತ. ಹೀಗಾಗಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕು ಎಂದು ವಿಎಚ್‌ಪಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಸೋಮವಾರ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಜೊತೆಗೆ ಈ ಕುರಿತು ಮುಖ್ಯಮಂತ್ರಿಗೆ ಮನವಿ ಕೂಡಾ ಸಲ್ಲಿಸಿದ್ದವು.

ಅದರ ಬೆನ್ನಲ್ಲೆ ನಾಗಪುರದಲ್ಲಿ ಸೋಮವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಕುರಾನ್‌ ಪ್ರತಿಯನ್ನು ಸುಡಲಾಗಿದೆ ಎಂಬ ವದಂತಿಯೊಂದು ಕಾಡ್ಗಿಚ್ಚಿನಂತೆ ಹರಡು ಹಿಂಸಾಚಾರ ನಡೆದಿದೆ. ಹಿಂಸಾಚಾರದ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಹಿಂಸಾಚಾರ ತಡೆಗೆ ಪೊಲೀಸರು ಆಶ್ರುವಾಯು ಸಿಡಿಸಿ, ಲಾಠಿಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.

ಬಿಗಿ ತಪಾಸಣೆ:

ಹಿಂದೂ ಸಂಘಟನೆಗಳಿಂದ ಸಮಾಧಿ ತೆರವರಿಗೆ ಆಗ್ರಹ ಕೇಳಿಬಂದ ಬೆನ್ನಲ್ಲೇ ಸಮಾಧಿ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಮಾಧಿಗೆ ಭೇಟಿ ನೀಡುವವರ ನೋಂದಣಿ, ಗುರುತಿನ ಚೀಟಿ ಪರಿಶೀಲನೆ ಕಡ್ಡಾಯಗೊಳಿಸಿದೆ. ಜೊತೆಗೆ ಖುಲ್ತಾಬಾದ್‌ ಪಟ್ಟಣ ಪ್ರವೇಶದ್ವಾರದಿಂದ ಸಮಾಧಿ ಇರುವ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಹಲವಾರು ಭದ್ರತಾ ಠಾಣೆಗಳನ್ನು ಸ್ಥಾಪಿಸಿದ್ದಾರೆ.