ನರೇಂದ್ರ ಮೋದಿ ಎಂಬ ವಿಶ್ವದ ಧೀಮಂತ ನಾಯಕ -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

| Published : Sep 17 2024, 12:07 PM IST

narendra modi

ಸಾರಾಂಶ

ಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛತೆಯ ಪಾಠ ಮಾಡಿದ ಪ್ರಧಾನಿ । ವಿದೇಶಗಳ ದೃಷ್ಟಿಯಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟ ಮೋದಿ

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

-ಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛತೆಯ ಪಾಠ ಮಾಡಿದ ಪ್ರಧಾನಿ । ವಿದೇಶಗಳ ದೃಷ್ಟಿಯಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟ ಮೋದಿ

ಭಾರತ ವಿಶ್ವಗುರು ಆಗಬೇಕೆಂಬುದು ಎಲ್ಲ ಭಾರತೀಯರ ಮಹದಾಸೆ. ನಮ್ಮ ಸಂಸ್ಕೃತಿ ನಮ್ಮೊಳಗೆ ತುಂಬಿದ ಧ್ಯೇಯವೂ ಹೌದು. ಎಲ್ಲರ ಏಳಿಗೆಗಾಗಿ ವಿಶ್ವಕ್ಕೆ ಮಾರ್ಗದರ್ಶಕ ಗುರುವಾಗುವ ಎಲ್ಲ ಅರ್ಹತೆ ಮತ್ತು ಶಕ್ತಿ ಭಾರತಕ್ಕಿದೆ. ಆದರೆ ದೇಶದ ನಾಯಕತ್ವ ಆ ದೃಷ್ಟಿಯಿಂದ ಯೋಚನೆ ಮಾಡಿರಲಿಲ್ಲ. ನಮ್ಮ ದೇಶಕ್ಕೆ ಅಂತಹ ದೃಷ್ಟಿ ಮತ್ತು ಶಕ್ತಿ ಇದೆ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದು ನಮ್ಮ ಆದರಣೀಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಎಂಬುದರಲ್ಲಿ ಎರಡು ಮಾತಿಲ್ಲ. ಮಾನ್ಯ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ವಿಶ್ವ ಮಟ್ಟದಲ್ಲಿ ಭಾರತ ಅತ್ಯಂತ ಶಕ್ತಿಯುತ ದೇಶವಾಗಿ ಹೊರಹೊಮ್ಮಿದೆ. ವಿಶ್ವದಾದ್ಯಂತ ನಾನೊಬ್ಬ ಭಾರತೀಯ ಮತ್ತು ನಾನೊಬ್ಬ ಹಿಂದೂ ಎಂದು ಧೈರ್ಯದಿಂದ ಎದೆತಟ್ಟಿ ಹೇಳುವಂತಹ ಸ್ಥಿತಿ ನಿರ್ಮಾಣವಾಗಿದ್ದು ನರೇಂದ್ರ ಮೋದಿಯವರು ನಿರ್ಮಿಸಿದ ವಾತಾವರಣದಿಂದಾಗಿ.

ವಿಶ್ವದಾದ್ಯಂತ ಮೋದಿಗೆ ಮನ್ನಣೆ

ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಮಾಡಿದ ಅಷ್ಟೇ ಕೆಲಸವನ್ನು ವಿಶ್ವಮಟ್ಟದಲ್ಲೂ ಮಾಡಿದ್ದಾರೆ. ನಮ್ಮ ದೇಶದಲ್ಲಿ ಅವರನ್ನು ಟೀಕಿಸುವವರು, ದ್ವೇಷಿಸುವವರು ಇರಬಹುದು. ಆದರೆ ವಿದೇಶದಲ್ಲಿ ಅವರಿಗೆ ಮನ್ನಣೆ ನೀಡುವವರೇ ಹೆಚ್ಚು. ನಾವು ನರೇಂದ್ರ ಮೋದಿಯವರನ್ನು ಹಿಂದೂ ಹೃದಯ ಸಾಮ್ರಾಟ ಎಂದೋ, ಹಿಂದೂ ಸಿಂಹ ಎಂದೋ ಪ್ರೀತಿಯಿಂದ ಕರೆಯುತ್ತೇವೆ. ಅಂತಹ ವ್ಯಕ್ತಿಯನ್ನು ಪಾಕಿಸ್ತಾನದವರು ನಮಗೂ ನರೇಂದ್ರ ಮೋದಿಯಂತಹ ಪ್ರಧಾನಿ ಬೇಕು ಎಂದು ಬಯಸುತ್ತಾರೆ. ಅಲ್ಲಿನ ಚುನಾವಣೆಗಳಲ್ಲಿ ಟೀಕೆಯ ಬದಲಾಗಿ ಒಳ್ಳೆಯ ಕಾರಣಕ್ಕೆ ಅತಿ ಹೆಚ್ಚು ಬಳಕೆಯಾದ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಇರಬೇಕು. ಅಲ್ಲಿನ ರಾಜಕಾರಣಿಗಳು ಭಾರತದ ಪ್ರಧಾನಿಯೊಬ್ಬರು ಮಾಡಿದ ಕೆಲಸಗಳನ್ನು ಉದಾಹರಣೆಯಾಗಿಟ್ಟುಕೊಂಡು, ಆ ರೀತಿ ನಾವೂ ಮಾಡುತ್ತೇವೆ ಎಂದು ಹೇಳುವ ಸ್ಥಿತಿ ನಿರ್ಮಾಣ ಮಾಡಿದ್ದು ಸಾಧನೆಯಲ್ಲದೆ ಇನ್ನೇನು?

ದೇಶಕ್ಕೆ ಲಾಭ ತಂದುಕೊಟ್ಟ ವಿದೇಶಾಂಗ ನೀತಿ

ಮೊದಲಿಂದಲೂ ಭಾರತ ತಟಸ್ಥ ನೀತಿಯನ್ನು ಅನುಸರಿಸಿಕೊಂಡು ಬಂದಿತ್ತು. ಅಂದರೆ ಒಂದು ರೀತಿಯಲ್ಲಿ ಯಾರಿಗೂ ಸಹಾಯವೂ ಆಗದ, ಯಾರಿಗೂ ಬೇಸರವನ್ನೂ ಮಾಡದ ವಿದೇಶಾಂಗ ನೀತಿ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಹಿತದೃಷ್ಟಿಯ ವಿದೇಶಾಂಗ ನೀತಿಯನ್ನು ಜಾರಿ ಮಾಡಿದರು. ಅದರ ಪರಿಣಾಮವಾಗಿಯೇ ಇಂದಿಗೂ ಪೆಟ್ರೋಲ್ ದರ 100 ರೂಪಾಯಿಯ ಆಸುಪಾಸಿನಲ್ಲಿಯೇ ಇದೆ. ಭಾರತದ ಹೊಸ ವಿದೇಶಾಂಗ ನೀತಿಯ ಪರಿಣಾಮವಾಗಿಯೇ ರಷ್ಯಾ ಮತ್ತು ಯುಕ್ರೇನ್ ಯುದ್ಧದಲ್ಲಿ ಭಾರತಕ್ಕೆ ಲಾಭವಾಗುವ ನೀತಿ ಅನುಸರಿಸಲು ಸಾಧ್ಯವಾಯಿತು. ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ಖರೀದಿಸಿದ್ದರಿಂದ ರಷ್ಯಾಕ್ಕೆ ಹಣ ದೊರೆಯಿತು. ನಮಗೆ ಕಡಿಮೆ ದರದಲ್ಲಿ ಕಚ್ಚಾ ತೈಲ ದೊರೆಯಿತು. ಉಳಿದ ದೇಶಗಳಿಗೂ ಭಾರತದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಲು ಸಹಾಯವಾಯಿತು.

ಇದೆಲ್ಲದರ ನಡುವೆಯೂ ಅಮೆರಿಕದೊಂದಿಗಿನ ಸಂಬಂಧ ಕೂಡ ಉತ್ತಮವಾಗಿಯೇ ಇತ್ತು. ಈ ಕಾರಣಕ್ಕಾಗಿಯೇ ನಮ್ಮ ಪ್ರಧಾನಿ ಇಂತಹ ಯುದ್ಧದ ಸಮಯದಲ್ಲೂ ರಷ್ಯಾ ಮತ್ತು ಯುಕ್ರೇನ್ ಎರಡೂ ದೇಶಗಳಿಗೆ ತಿಂಗಳುಗಳ ಅಂತರದಲ್ಲಿ ಭೇಟಿ ನೀಡಲು ಕೂಡ ಸಾಧ್ಯವಾಯಿತು. ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಬಹುತೇಕ ದೇಶಗಳು ಒಂದಲ್ಲ ಒಂದು ದೇಶದ ಪರವಹಿಸಿವೆ. ಭಾರತ ಮಾತ್ರ ರಷ್ಯಾದೊಂದಿಗೆ ಉತ್ತಮ ಗೆಳೆತನ ಇಟ್ಟುಕೊಂಡೂ, ಎರಡೂ ದೇಶಗಳೊಂದಿಗೆ ಬಾಂಧವ್ಯ ಹೊಂದಿದೆ. ಹೀಗಾಗಿಯೇ ಎರಡೂ ದೇಶಗಳ ನಡುವೆ ಸಂಧಾನ ಏರ್ಪಡಿಸುವ, ಮಧ್ಯಸ್ಥಿಕೆ ನಡೆಸುವ ಅರ್ಹತೆ ಹೊಂದಿದೆ. ವಿಶ್ವದಲ್ಲಿ ಭಾರತಕ್ಕೆ, ಭಾರತದ ನಾಯಕತ್ವಕ್ಕೆ ಎಷ್ಟು ಮಾನ್ಯತೆ ಇದೆ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಅಗತ್ಯವಿಲ್ಲ.

ಕೊರೋನಾ ಸಂಕಷ್ಟ ಮೆಟ್ಟಿ ನಿಂತ ಪರಿ

ಇಂದು ವಿಶ್ವದ ನಾಯಕರು ಹಲವಾರು ಕಾರಣಗಳಿಗೆ ಭಾರತದತ್ತ ದೃಷ್ಟಿ ನೆಟ್ಟಿದ್ದಾರೆ. ಕೊರೋನಾದಂತಹ ಅತ್ಯಂತ ಕ್ಲಿಷ್ಟಕರ ಸನ್ನಿವೇಶವನ್ನು ಭಾರತದಲ್ಲಿ ನಿಭಾಯಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಅಪಾರ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೊರೋನಾ ವೈರಾಣು ಹರಡಿದ್ದರೆ ಅದರಿಂದಾಗುವ ಅಪಾಯವನ್ನು ಊಹಿಸಲೂ ಸಾಧ್ಯವಿರಲಿಲ್ಲ. ಅಂತಹ ಸ್ಥಿತಿಯಲ್ಲಿ ದೇಶವನ್ನು ಮತ್ತು ದೇಶವಾಸಿಗಳನ್ನು ಇವೆರಡನ್ನೂ ಅತ್ಯಂತ ಸಮರ್ಥವಾಗಿ ನಿಭಾಯಿಸುವುದರ ಜತೆಗೆ, ಇಡೀ ವಿಶ್ವಕ್ಕೆ ಕೊರೋನಾ ವಿರುದ್ಧದ ಲಸಿಕೆ ಪೂರೈಸುವ ನೇತೃತ್ವವನ್ನೂ ದೇಶ ವಹಿಸಿತು ಎಂಬುದನ್ನು ನಾವು ಮರೆಯಬಾರದು. ನೂರು ಕೋಟಿಗೂ ಮಿಕ್ಕ ಜನರಿಗೆ ಉಚಿತವಾಗಿ ಲಸಿಕೆ ನೀಡುವುದರ ಜತೆಗೆ ವಿಶ್ವದಾದ್ಯಂತ ಲಸಿಕೆ ಪೂರೈಸುವುದು ದೊಡ್ಡ ಸವಾಲಿನ ಕೆಲಸವೇ ಸರಿ.

2014ರಿಂದ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜನಮೆಚ್ಚುವ, ಜಗಮೆಚ್ಚುವ ಸಾವಿರಾರು ಕೆಲಸಗಳನ್ನು ಮಾಡಿದ್ದಾರೆ. ಈ ಭಾರತ ಹಿಂದೆಂದೂ ಮಾಡಿರದ ಸಾಧನೆಗಳಿಗೆ ಸಾಕ್ಷಿಯಾಗಿದೆ. ದೇಶಾದ್ಯಂತ ಮೂಲಸೌಕರ್ಯ ಅಪಾರ ಅಭಿವೃದ್ಧಿ ಕಂಡಿದೆ. ವಿಶ್ವದರ್ಜೆಯ ರಸ್ತೆ, ಸೇತುವೆ, ವಿಶ್ವದ ಅತ್ಯಂತ ಎತ್ತರದ ಸೇತುವೆ, ಸಮುದ್ರದಲ್ಲಿ ಸೇತುವೆಗಳನ್ನೆಲ್ಲ ದೇಶ ಕಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಅದರಲ್ಲಿ ನಾನು ಅತ್ಯಂತವಾಗಿ ಮೆಚ್ಚಿಕೊಂಡ ಒಂದು ಕೆಲಸವೆಂದರೆ ಸ್ವಚ್ಛ ಭಾರತ ಯೋಜನೆ. ದೃಷ್ಟಿಯಲ್ಲಿ ಅತ್ಯಂತ ಜನೋಪಯೋಗಿ ಮತ್ತು ದೂರದೃಷ್ಟಿಯ ಕೆಲಸಗಳು.p

ಜನರನ್ನು ಸ್ವಚ್ಛತೆಗೆ ಪ್ರೇರೇಪಿಸಿದ ಪ್ರಧಾನಿ

ವಿಶ್ವದಾದ್ಯಂತ ಭಾರತ ಅಂದರೆ ನಾಗರಿಕ ಪ್ರಜ್ಞೆ ಇಲ್ಲದವರ ದೇಶ ಎಂಬ ಭಾವನೆ ಇದೆ. ಅದನ್ನು ಹೋಗಲಾಡಿಸುವುದು ದೇಶದ ಗೌರವದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿತ್ತು. ದೇಶದಲ್ಲೆಲ್ಲ ಇರುವ ಕಸವನ್ನು ದಿನವೂ ಸ್ವಚ್ಛಗೊಳಿಸುವುದು ಯಾವ ಸರ್ಕಾರದಿಂದಲೂ ಆಗದ ಕೆಲಸ ಮತ್ತು ಅದು ಜನರ ಮನಸ್ಥಿತಿಯ ಬದಲಾವಣೆಯಿಂದ ಮಾತ್ರ ಸಾಧ್ಯವಾಗುವ ಕೆಲಸ ಎಂಬುದನ್ನು ಪ್ರಧಾನಿ ಮನಗಂಡಿದ್ದರು. ಹಾಗಾಗಿಯೇ ಅವರು ಸ್ವಚ್ಛ ಭಾರತ ಎಂಬುದನ್ನು ಸರ್ಕಾರಿ ಯೋಜನೆಯನ್ನಾಗಿ ಮಾಡದೆ, ಜನರ ಮನೋಭಾವವನ್ನೇ ಬದಲಿಸುವ ಯೋಜನೆಯನ್ನಾಗಿಸಿದರು. ಜನರು ತಾವಾಗಿಯೇ ಮನೆಯ ಪರಿಸರ, ರಸ್ತೆ, ಶಾಲೆಯ ಪರಿಸರ ಸ್ವಚ್ಛವಾಗಿಡುವ, ಎಲ್ಲೆಂದರಲ್ಲಿ ಕಸ ಬಿಸಾಡದೇ ಇರುವುದನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸಿದರು. ಸ್ವತಃ ತಾವೇ ಕಸಬರಿಕೆ ಹಿಡಿದ ಮೊದಲ ಪ್ರಧಾನಿಯೂ ಆದರು. ಅದನ್ನು ಕೇವಲ ಒಂದು ವರ್ಷಕ್ಕೆ ಅಥವಾ ಪ್ರಚಾರಕ್ಕಾಗಿ ಮಾಡಲಿಲ್ಲ. ಮೋದಿಯವರು ಕಸಗುಡಿಸುವ ಫೋಟೋವನ್ನು ಟೀಕಿಸಿದವರೂ ಇದ್ದಾರೆ. ಅವರು ಕಸ ಗುಡಿಸಬೇಕಿರಲಿಲ್ಲ. ಆದರೆ ಅವರು ಹಾಗೆ ಮಾಡುವ ಮೂಲಕ ದೇಶದ ಕೋಟ್ಯಂತರ ಜನರಿಗೆ ಪ್ರೇರಣೆ ನೀಡಿದರು ಮತ್ತು ಅದೇ ಅವರ ಉದ್ದೇಶವೂ ಆಗಿತ್ತು. ಅವರು ನಿಜವಾಗಿ ಕಸಗುಡಿಸಿದರೋ ಇಲ್ಲವೋ ಎಂಬುದಕ್ಕಿಂತ ಅವರು ಹಾಗೆ ಮಾಡಿದ್ದರಿಂದ ದೇಶಾದ್ಯಂತ ಎಷ್ಟು ಜನರ ಮೇಲೆ ಅದು ಪರಿಣಾಮ ಬೀರಿತು ಎಂಬುದು ಹೆಚ್ಚು ಮುಖ್ಯ ಎಂಬುದು ನನ್ನ ಭಾವನೆ.

ಪ್ರಧಾನಿಯಾದವರು ಕೇವಲ ಆಡಳಿತ ದೃಷ್ಟಿಯಿಂದ, ದೇಶದ ದೃಷ್ಟಿಯಿಂದ ನೋಡದೆ, ಜನಮಾನಸದ ಬದಲಾವಣೆ, ವಿಶ್ವದ ಹಿತದೃಷ್ಟಿ, ಸಮಷ್ಠಿಯ ಹಿತವನ್ನು ಗಮನಿಸಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ನಮ್ಮ ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿಕೊಟ್ಟಿದ್ದಾರೆ. ಅವರಂತಹ ನಾಯಕ, ಪ್ರಧಾನಿ ಸಿಕ್ಕಿದ್ದು ದೇಶದ ಪುಣ್ಯವೇ ಸರಿ.