ಕಾಂಗ್ರೆಸ್‌ಗೂ 26/11 ಉಗ್ರರಿಗೂ ನಂಟು ಇದೆಯೇ: ಮೋದಿ

| Published : May 08 2024, 01:09 AM IST

ಕಾಂಗ್ರೆಸ್‌ಗೂ 26/11 ಉಗ್ರರಿಗೂ ನಂಟು ಇದೆಯೇ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ಕರೆ ಸಾವಿನ ಕುರಿತು ಕಸಬ್‌ ಪರ ಕೈ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಜನರು ವೋಟ್‌ ಜಿಹಾದ್ ಬೇಕೋ, ರಾಮರಾಜ್ಯ ಬೇಕೋ ನಿರ್ಧರಿಸಲಿ ಎಂದು ಪ್ರಧಾನಿ ಮೋದಿ ಜನರ ಆಯ್ಕೆಗೆ ಬಿಟ್ಟಿದ್ದಾರೆ.

ಬೀಡ್‌/ಅಹ್ಮದ್‌ನಗರ: 26/11 ಮುಂಬೈ ಬಾಂಬ್‌ ದಾಳಿಯಲ್ಲಿ ಉಗ್ರ ಕಸಬ್ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆಯನ್ನು ಕೊಂದಿಲ್ಲ. ಅವರನ್ನು ಕೊಂದಿದ್ದು ಆರೆಸ್ಸೆಸ್‌ ನಂಟಿನ ಪೊಲೀಸ್‌ ಅಧಿಕಾರಿ ಎಂಬ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ವಿಜಯ ವಡೆಟ್ಟಿವಾರ್‌ ಹೇಳಿಕೆಗೆ ಪ್ರಧಾನಿ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಅಂದು ದಾಳಿ ಮಾಡಿದ 10 ಪಾಕ್‌ ಉಗ್ರರ ಜೊತೆ ಕಾಂಗ್ರೆಸ್‌ಗೆ ಸಂಬಂಧ ಇದೆ ಎಂಬ ಭಾವನೆ ಮೂಡುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ 2 ಕಡೆ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ರಾಷ್ಟ್ರದ ಜನತೆ 26/11 ಉಗ್ರರಿಗೂ ಕಾಂಗ್ರೆಸ್ ಪಕ್ಷಕ್ಕೂ ಇರುವ ಸಂಬಂಧ ಯಾವ ರೀತಿಯದ್ದು ಎಂಬುದಾಗಿ ಪ್ರಶ್ನಿಸುತ್ತಿದ್ದಾರೆ. ಅವರ (ಯುಪಿಎ) ಅವಧಿಯಲ್ಲಿ ಪ್ರಧಾನಿ ನಿವಾಸಕ್ಕೆ ಉಗ್ರರನ್ನು ಕರೆದು ರಾಜಮರ್ಯಾದೆ ನೀಡುತ್ತಿದ್ದರು. ಜೊತೆಗೆ ದೆಹಲಿಯಲ್ಲಿ ಬಟ್ಲಾ ಹೌಸ್‌ ಎನ್‌ಕೌಂಟರ್‌ಗೆ ಕಾಂಗ್ರೆಸ್‌ ಹಿರಿಯ ನಾಯಕರೊಬ್ಬರು ತೀವ್ರ ವಿಷಾದ ವ್ಯಕ್ತಪಡಿಸಿದ್ದರು. ಆದರೆ ನಾನು ಉಗ್ರರಿಗೆ ಬಂಡೆಯ ರೀತಿಯಲ್ಲಿ ಅಡ್ಡ ನಿಂತಿದ್ದೇನೆ. ಕಾಂಗ್ರೆಸ್‌ನವರಿಗೆ ಇಂತಹ ದಿನಗಳು ಮತ್ತೆ ಮರುಕಳಿಸಲಿ ಎಂಬ ಆಶಯವಿದೆಯೇ?’ ಎಂದು ಪ್ರಶ್ನಿಸಿದರು.

ಅಲ್ಲದೆ, ‘ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕೆಂದು ಕಾಂಗ್ರೆಸ್‌ನ ಬಿ ಟೀಂ ಪಾಕಿಸ್ತಾನದಲ್ಲಿ ಕಾಯುತ್ತಿದೆ’ ಎಂದೂ ಕಿಡಿಕಾರಿದರು.

ಇದೇ ವೇಳೆ ಉಗ್ರರ ಮೇಲೆ ದಿಲ್ಲಿಯ ಬಾಟ್ಲಾ ಹೌಸ್‌ ಎಂಕೌಂಟರ್‌ ನಡೆದಾಗ ಒಬ್ಬರು ಅತ್ತಿದ್ದರು ಎಂದು ಕಾಂಗ್ರೆಸ್‌ ನಾಯಲಿ ಸೋನಿಯಾ ಗಾಂಧಿ ಅವರನ್ನು ಮೋದಿ ಕುಟುಕಿದರು.

ಅಲ್ಲದೆ, ವೋಟ್‌ ಜಿಹಾದ್ ನಡೆಸಬೇಕು ಎಂಬ ಇಂಡಿಯಾ ಕೂಟದ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ಜನರು ವೋಟ್‌ ಜಿಹಾದ್‌ ಬೇಕೋ ರಾಮರಾಜ್ಯ ಬೇಕೋ ನಿರ್ಧರಿಸಬೇಕು ಎಂದು ಮನವಿ ಮಾಡಿದರು.