ಮೇಕ್‌ ಇನ್‌ ಇಂಡಿಯಾ ಉತ್ತೇಜನಕ್ಕೆ ರಾಷ್ಟ್ರೀಯ ಉತ್ಪಾದನಾ ಮಿಷನ್‌ - ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಗೆ ಬೆಂಬಲ

| N/A | Published : Feb 02 2025, 07:02 AM IST

Make in India

ಸಾರಾಂಶ

ಭಾರತದಲ್ಲೇ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಆರಂಭಿಸಲಾದ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ‘ರಾಷ್ಟ್ರೀಯ ಉತ್ಪಾದನಾ ಮಿಷನ್‌’ ಸ್ಥಾಪಿಸುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ

ನವದೆಹಲಿ :  ಭಾರತದಲ್ಲೇ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಆರಂಭಿಸಲಾದ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ‘ರಾಷ್ಟ್ರೀಯ ಉತ್ಪಾದನಾ ಮಿಷನ್‌’ ಸ್ಥಾಪಿಸುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ. 

ಈ ಮಿಷನ್‌ ಕುರಿತು ಮಾತನಾಡಿದ ಸಚಿವೆ, ‘ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಸಣ್ಣ, ಮದ್ಯಮ ಮತ್ತು ಬೃಹತ್‌ ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ಉತ್ಪಾದನಾ ಮಿಷನ್‌ ಅನ್ನು ಸರ್ಕಾರ ಸ್ಥಾಪಿಸಲಿದೆ. ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ದೇಶದ ಆರ್ಥಿಕತೆಯ ಏಕೀಕರಣಕ್ಕಾಗಿ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಬೆಂಬಲ ನೀಡಲಾಗುವುದು. ಇದು ಕೇಂದ್ರ ಹಾಗೂ ರಾಜ್ಯ ಸಚಿವಾಲಯಗಳಿಗೆ ನೈತಿಕ, ಆಡಳಿತ ಹಾಗೂ ಮೇಲ್ವಿಚಾರಣಾ ಮಾರ್ಸೂಚಿಯನ್ನು ಒದಗಿಸಲಿದೆ’ ಎಂದು ಹೇಳಿದರು.

ರಾಷ್ಟ್ರೀಯ ಉತ್ಪಾದನಾ ಮಿಷನ್‌ 5 ಕ್ಷೇತ್ರಗಳತ್ತ ಗಮನ ಹರಿಸಲಿದೆ. ಅವುಗಳು:

-ವ್ಯಾಪಾರ ಮಾಡಲು ಅನುಕೂಲಕರ ವಾತಾವರಣ ಹಾಗೂ ಅದರ ವೆಚ್ಚ

-ಬೇಡಿಕೆಯಲ್ಲಿರುವ ಉದ್ಯೋಗಗಳಿಗೆ ಯೋಗ್ಯ ನೌಕರವೃಂದದ ತಯಾರಿ

-ಕ್ರಿಯಾತ್ಮಕ ಎಂಎಸ್‌ಎಂಇ ವಲಯ

-ತಂತ್ರಜ್ಞಾನದ ಲಭ್ಯತೆ

-ಉತ್ತಮ ಗುಣಮಟ್ಟದ ಉತ್ಪನ್ನಗಳು

ಜಯಂತಿ, ವಾರ್ಷಿಕೋತ್ಸವಕ್ಕೆ ಸಂಸ್ಕೃತಿ ಇಲಾಖೆಗೆ 3360 ಕೋಟಿ

ಕೇಂದ್ರ ಸಂಸ್ಕೃತಿ ಇಲಾಖೆಗೆ ಈ ಬಾರಿ ಹೆಚ್ಚು ಅನುದಾನ ನೀಡಲಾಗಿದೆ. ₹3360 ಕೋಟಿಯನ್ನು ಮೀಸಲಿಡಲಾಗಿದೆ. ಇನ್ನು ಪುರಾತತ್ವ ಇಲಾಖೆಗೆ ₹1278 ಕೋಟಿ ಘೋಷಿಸಲಾಗಿದೆ. ಸಂಸ್ಕೃತಿ ಇಲಾಖೆಗೆ ಕೇಂದ್ರ ಹೆಚ್ಚು ಹಣ ನೀಡುತ್ತಿದ್ದರೂ ಶತಮಾನೋತ್ಸವ, ವಾರ್ಷಿಕೋತ್ಸವ ಆಚರಣೆಗಳನ್ನು ಕಡಿತ ಮಾಡುತ್ತಿದೆ. ವಾರ್ಷಿಕೋತ್ಸವ, ಶತಮಾನೋತ್ಸವಕ್ಕೆ ಕಳೆದ ಬಾರಿ ₹110 ಕೋಟಿ ನೀಡಿದ್ದ ಕೇಂದ್ರ, ಈ ಬಾರಿ ಕೇವಲ ₹35 ಕೋಟಿ ನಿಗದಿ ಪಡಿಸಿದೆ.

 ಆದರೂ 150ನೇ ಬಿರ್ಸಾ ಮುಂಡಾ ವಾರ್ಷಿಕೋತ್ಸವ, 75ನೇ ಸಂವಿಧಾನ ದಿನ, 300ನೇ ಅಹಲ್ಯಾ ದೇವಿ ಹೋಳ್ಕರ್‌ ಜಯಂತಿ ಆಚರಣೆಗೆ ಅಡ್ಡಿ ಆಗದು ಎನ್ನಲಾಗಿದೆ. ಇನ್ನು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮ್ಮಿಲನಕ್ಕೂ ಹಣ ಕಡಿತ ಮಾಡಲಾಗಿದೆ. ಕಳೆದ ಬಾರಿ ₹10 ಕೋಟಿ ನೀಡಿದ್ದ ಕೇಂದ್ರ ಈ ವರ್ಷ ಕೇವಲ ₹4.65 ಕೋಟಿ ಮೀಸಲಿಟ್ಟಿದೆ. ಪುರಾತತ್ವ ಇಲಾಖೆಯು ಯುನೆಸ್ಕೋ ಘೋಷಿತ ಸ್ಥಳಗಳು ಸೇರಿದಂತೆ 3593 ಪಾರಂಪರಿಕ ಕೇಂದ್ರಗಳನ್ನು ರಕ್ಷಣೆ, ಸಂರಕ್ಷಣೆ, ಅಭಿವೃದ್ಧಿ ಪಡಿಸುತ್ತಿದೆ. 

ಇನ್ನು ಐತಿಹಾಸಿಕ ರಾಷ್ಟ್ರೀಯ ಗ್ರಂಥಗಳು, ದಾಖಲೆಗಳ ರಕ್ಷಣೆಗೆ ₹156 ಕೋಟಿ ನೀಡಲಾಗಿದೆ. ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮತ್ತು ರಾಷ್ಟ್ರೀಯ ಕಲಾ ಗ್ಯಾಲರಿಗಳು ₹126 ಕೋಟಿ ಪಡೆದುಕೊಳ್ಳಲಿವೆ. ಕಲಾ ಸಂಸ್ಕೃತಿ ವಿಕಾಸ ಯೋಜನೆಗೆ 198 ಕೋಟಿ ಅನುದಾನ ನೀಡಲಾಗುತ್ತದೆ. ಪುರಾತನ ಗ್ರಂಥಗಳು, ರಾಷ್ಟ್ರೀಯ ಮ್ಯಾನುಸ್ಕ್ರಿಪ್ಟ್‌ ಮಿಷನ್‌ ಹೆಚ್ಚಿನ ಒತ್ತು ನೀಡಲಾಗಿದ್ದು ₹60 ಕೋಟಿ ಮೀಸಲಿರಿಸಲಾಗಿದೆ. ಇನ್ನು ಸ್ವಯತ್ವ ಸಂಸ್ಥೆಗಳಾದ ಸಂಗೀತ ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಗಳಿಗೆ 411 ಕೋಟಿ ನೀಡಲಾಗಿದೆ.

ಬುಡಕಟ್ಟು ಜನರ ಅಭಿವೃದ್ಧಿಗೆ 14900 ಕೋಟಿ! 

ದೇಶಾದ್ಯಂತ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿದೆ. ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ 14,925.81 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.45ರಷ್ಟು ಹೆಚ್ಚಿದೆ.

ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 7,088.60 ಕೋಟಿ ರು. ನಿಗದಿಪಡಿಸಿದೆ. ಆದಿವಾಸಿಗಳಿಗೆ ಉದ್ಯೋಗಾವಕಾಶ ನೀಡುವ ಪ್ರಧಾನ ಮಂತ್ರಿ ಜನಜಾತೀಯ ವಿಕಾಸ ಮಿಷನ್‌ನ ಅನುದಾನವನ್ನು 152 ಕೋಟಿಗಳಿಂದ 380 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ(ಪಿಎಂಎಎಜಿವೈ)ಯ ಅನುದಾನವನ್ನು ಸಹ 127.51 ಕೋಟಿಯಿಂದ 335.97 ಕೋಟಿ ರು.ಗೆ ಹೆಚ್ಚಿಸಲಾಗಿದೆ. 

ಬುಡಕಟ್ಟು ಜನರ ಸಮಾಜೋ-ಆರ್ಥಿಕ ಉನ್ನತಿಗಾಗಿ ಆರಂಭಿಸಿದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (ಪಿಎಂ ಜೆಎಎನ್‌ಎಂಎಎನ್) ಬಜೆಟ್ ಅನ್ನು 150 ಕೋಟಿಯಿಂದ 300 ಕೋಟಿ ರು.ಗೆ ದ್ವಿಗುಣಗೊಳಿಸಲಾಗಿದೆ. ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದ (ಡಿಎಜೆಜಿಯುಎ) ಅನುದಾನವನ್ನು 4 ಪಟ್ಟು ಹೆಚ್ಚಿಸಲಾಗಿದ್ದು, 500 ಕೋಟಿಯಿಂದ 2,000 ಕೋಟಿ ರು.ಗೆ ಏರಿಸಲಾಗಿದೆ. ಈ ಎಲ್ಲ ಕ್ರಮಗಳಿಂದ 5 ವರ್ಷಗಳಲ್ಲಿ ದೇಶದ 5 ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎಸ್‌ಸಿ-ಎಸ್‌ಟಿ, ಮಹಿಳೆಯರಿಗೆ 2 ಕೋಟಿ ರು.ವರೆಗೆ ಸಾಲ

ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್‌ಸಿ, ಎಸ್‌ಟಿ ಮತ್ತು ಮಹಿಳೆಯರಿಗೆ 2 ಕೋಟಿ ರು.ವರೆಗೂ ಸಾಲ ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

2025-26ರ ಕೇಂದ್ರ ಬಜೆಟ್ ಮಂಡಿಸಿದ ಅವರು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿಗೆ ಉತ್ಪಾದನಾ ಮಿಷನ್ ಸ್ಥಾಪಿಸಲಾಗುವುದು ಎಂದು ಹೇಳಿದರು. ಕಾರ್ಮಿಕ ವಲಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರವು ಹಲವು ಸೌಲಭ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 20 ಕೋಟಿ ರು.ಗಳಿಗೆ ದ್ವಿಗುಣಗೊಳಿಸಲಾಗುತ್ತದೆ, ಗ್ಯಾರಂಟಿ ಶುಲ್ಕವನ್ನು ಶೇ.1 ಕ್ಕೆ ಇಳಿಸಲಾಗುತ್ತದೆ ಎಂದು ತಿಳಿಸಿದರು.