ಸಾರಾಂಶ
ನವದೆಹಲಿ: ಉತ್ತಮ ಆಡಳಿತ, ರಾಷ್ಟ್ರೀಯ ಭದ್ರತೆ, ಆಪರೇಷನ್ ಸಿಂದೂರ್, ಜಾತಿ ಜನಗಣತಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಕೇಂದ್ರೀಕರಿಸಿ ಪ್ರಧಾನಿ ನರೇಂದ್ರ ಮೋದಿಯವರು ಎನ್‌ಡಿಎ ಒಕ್ಕೂಟದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಜತೆ ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿದರು. ಎನ್‌ಡಿಎ ಆಡಳಿತವಿರುವ 20 ರಾಜ್ಯಗಳ ಮುಖ್ಯಮಂತ್ರಿಗಳು, 18 ಉಪಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮದ ಕುರಿತು ಪ್ರಸ್ತಾವಿಸಿದ ಪ್ರಧಾನಿ ಮೋದಿ, ‘ಕದನ ವಿರಾಮವನ್ನು ಯಾವುದೇ 3ನೇ ವ್ಯಕ್ತಿಯ ಮಧ್ಯಸ್ಥಿಕೆಯಿಲ್ಲದೆ ದ್ವಿಪಕ್ಷೀಯವಾಗಿ ಒಪ್ಪಿಕೊಳ್ಳಲಾಯಿತು. ಪಾಕಿಸ್ತಾನವೇ ಕದನ ವಿರಾಮವನ್ನು ಬಯಸಿ, ನಮ್ಮನ್ನು ಸಂಪರ್ಕಿಸಿತು. ಇದರಲ್ಲಿ ಬೇರೆ ಯಾವುದೇ 3ನೇ ವ್ಯಕ್ತಿ ಭಾಗಿಯಾಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಪ್ರತಿಯೊಂದು ವಲಯದಲ್ಲೂ ಅಂಚಿನಲ್ಲಿರುವವರನ್ನು ಮತ್ತು ಹಿಂದುಳಿದವರನ್ನು ಮುನ್ನೆಲೆಗೆ ತರುವ ನಮ್ಮ ಸರ್ಕಾರದ ಅಭಿವೃದ್ಧಿ ಮಾದರಿಯೊಂದಿಗೆ ಜಾತಿ ಎಣಿಕೆ ಹೊಂದಿಕೆಯಾಗುತ್ತದೆ’ ಎಂದು ಹೇಳಿದರು.