ಇತಿಹಾಸ ತಿರುಚಲು ಹೊರಟ ಬಾಂಗ್ಲಾದೇಶ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ

| Published : Jan 03 2025, 12:32 AM IST / Updated: Jan 03 2025, 04:49 AM IST

ಸಾರಾಂಶ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ, ದೇಶದ ಇತಿಹಾಸ ತಿರುಚುವ ಹಲವು ಪ್ರಯತ್ನ ಮಾಡಿರುವ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಇದೀಗ ಮತ್ತೆ ಅಂಥದ್ದೇ ಕೆಲಸ ಮಾಡಿದೆ.

ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ, ದೇಶದ ಇತಿಹಾಸ ತಿರುಚುವ ಹಲವು ಪ್ರಯತ್ನ ಮಾಡಿರುವ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಇದೀಗ ಮತ್ತೆ ಅಂಥದ್ದೇ ಕೆಲಸ ಮಾಡಿದೆ. 

ಬಾಂಗ್ಲಾದೇಶ ಸ್ವಾತಂತ್ರ್ಯ ಘೋಷಣೆ ಮಾಡಿದ್ದು ಶೇಖ್‌ ಮುಜೀಬುರ್‌ ಎಂಬುದರ ಬದಲಾಗಿ ಘೋಷಣೆ ಮಾಡಿದ್ದು ಜಿಯಾವುರ್‌ ರೆಹಮಾನ್‌ ಎಂದು ಬದಲಾಯಿಸಿದೆ.

ದೇಶದ ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಈ ಕುರಿತು ಬದಲಾವಣೆ ಮಾಡಲಾಗಿದೆ. 1971ರ ಪಾಕ್‌ ವಿರುದ್ಧ ಯುದ್ಧದಲ್ಲಿ ಬಾಂಗ್ಲಾದೇಶಕ್ಕೆ ಗೆಲುವು ಸಿಕ್ಕ ಬಳಿಕ, ಮುಜೀಬುರ್‌ ರೆಹಮಾನ್‌, ಬಾಂಗ್ಲಾದೇಶ ವಿಮೋಚನೆಗೊಂಡಿದೆ ಎಂದು ವೈರ್‌ಲೆಸ್‌ ಸಂದೇಶ ರವಾನಿಸಿದ್ದರು. ಆದರೆ ಸೇನೆಯಲ್ಲಿ ಕಮಾಂಡರ್‌ ಆಗಿದ್ದ ಜಿಯಾವುರ್‌ ರೆಹಮಾನ್‌ ಅದನ್ನು ಓದಿ ಹೇಳಿದ್ದರು.

ಆದರೆ ಪಠ್ಯಗಳಲ್ಲಿ ವಾಸ್ತವ ತಿರುಚಲಾಗಿದೆ. ಈ ಕಾರಣಕ್ಕಾಗಿ ಸಾಕ್ಷ್ಯ ಆಧರಿಸಿ ವಿಮೋಚನೆ ಘೋಷಿಸಿದ್ದು ಜಿಯಾವುರ್‌ ಎಂದು ಬದಲಾವಣೆ ಮಾಡಲಾಗಿದೆ ಎಂದು ಪಠ್ಯಪುಸ್ತಕ ಪುನರ್‌ ರಚನಾ ಸಮಿತಿ ಹೇಳಿದೆ.

ಜೊತೆಗೆ ಬಾಂಗ್ಲಾದ ಪಿತಾಮಹಾ ಎನ್ನುವ ಹೆಸರಿನಿಂದಲೂ ಶೇಖ್‌ ಮುಜಿಬರ್‌ ರೆಹಮಾನ್ ಅವರ ಹೆಸರನ್ನು ಪರಿಷ್ಕರಣೆಯಲ್ಲಿ ತೆಗೆದು ಹಾಕಲಾಗಿದೆ.

ಮುಜೀಬುರ್‌, ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ತಂದೆ. ಹೀಗಾಗಿ ಸೇಡಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವಾಮೀ ಲೀಗ್‌ ನಾಯಕರು ಆರೋಪಿಸಿದ್ದರು.ಮಧ್ಯಂತರ ಸರ್ಕಾರ ಬಂದ ಬಳಿಕ, ಹೊಸ ನೋಟುಗಳಲ್ಲಿ ಮುಜೀಬುರ್‌ ಫೊಟೋಕ್ಕೆ ಕೊಕ್‌ ನೀಡಲು, ಮುಜೀಬುರ್‌ ಹತ್ಯೆ ನಡೆದ ಆ.15ಕ್ಕೆ ನೀಡುತ್ತಿದ್ದ ರಾಷ್ಟ್ರೀಯ ರಜೆ ರದ್ದು ಮಾಡಲಾಗಿತ್ತು. ದೇಶವ್ಯಾಪಿ ಇದ್ದ ಅವರ ಪ್ರತಿಮೆಗಳನ್ನು ಉರುಳಿಸಲಾಗಿತ್ತು.