ಸಾರಾಂಶ
ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಹಿಂದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತವು ‘ಯುಎಸ್ ಏಡ್’ ನೆಪದಲ್ಲಿ 180 ಕೋಟಿ ರು. ನೀಡಿತ್ತು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಆರೋಪದ ವಿವಾದ ಶುಕ್ರವಾರ ತಿರುವು ಪಡೆದುಕೊಂಡಿದೆ.
ನವದೆಹಲಿ: ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಹಿಂದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತವು ‘ಯುಎಸ್ ಏಡ್’ ನೆಪದಲ್ಲಿ 180 ಕೋಟಿ ರು. ನೀಡಿತ್ತು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಆರೋಪದ ವಿವಾದ ಶುಕ್ರವಾರ ತಿರುವು ಪಡೆದುಕೊಂಡಿದೆ.
‘2022 ರಲ್ಲಿ ಅಮೆರಿಕ 180 ಕೋಟಿ ರು. ನಿಧಿಯನ್ನು ನೀಡಿದ್ದು ಭಾರತಕ್ಕೆ ಅಲ್ಲ, ಬಾಂಗ್ಲಾದೇಶಕ್ಕೆ. ಇದನ್ನು ಭಾರತಕ್ಕೆ ನೀಡಲಾಗಿದೆ ಎಂದು ಟ್ರಂಪ್ ತಪ್ಪಾಗಿ ವ್ಯಾಖ್ಯಾನಿಸಿ ಹೇಳಿದ್ದಾರೆ. ಈ ಬಗ್ಗೆ ದಾಖಲೆಗಳು ಲಭಿಸಿವೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರ ಬೆನ್ನಲ್ಲೇ, ಈ ವರದಿಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ವರದಿಯನ್ನು ಕಾಂಗ್ರೆಸ್ ಸಮರ್ಥಿಸಿದರೆ, ಈ ವರದಿ ಸುಳ್ಳು ಎಂದು ಬಿಜೆಪಿ ತಿರುಗೇಟು ನೀಡಿದೆ.
ಬಿಜೆಪಿಯಿಂದ ಸುಳ್ಳು ಆರೋಪ
‘2022ರಲ್ಲಿ ಭಾರತಕ್ಕೆ ಅಲ್ಲ, ಬಾಂಗ್ಲಾದೇಶಕ್ಕೆ 180 ಕೋಟಿ ರು. ಹಂಚಿಕೆ ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಸತ್ಯಾಸತ್ಯತೆ ಪರಿಶೀಲಿಸದೇ ವಿಪಕ್ಷಗಳತ್ತ ಬಿಜೆಪಿ ಬೆರಳು ತೋರಿಸುತ್ತಿದೆ. ಇದು ದೇಶ ವಿರೋಧಿ ಕೃತ್ಯವಲ್ಲವೆ?
- ಕಾಂಗ್ರೆಸ್
ಬಾಂಗ್ಲಾ, ಭಾರತ ಎರಡಕ್ಕೂ ಹಣ
ಬಾಂಗ್ಲಾದೇಶಕ್ಕೆ ಅಮೆರಿಕ ನೀಡಿದ್ದು ₹250 ಕೋಟಿ. ಭಾರತಕ್ಕೆ ಕೊಟ್ಟಿದ್ದು ₹180 ಕೋಟಿ. ಟ್ರಂಪ್ ಈ ಹೇಳಿಕೆಯನ್ನು 3 ಬಾರಿ ನೀಡಿದ್ದಾರೆ. ಅವರು ಈ ಬಗ್ಗೆ ಗೊಂದಲ ಮಾಡಿಕೊಂಡಿಲ್ಲ. ಆದರೆ ಭಾರತಕ್ಕೆ ಹಣ ನೀಡಿಲ್ಲ ಎಂಬ ವರದಿ ಸುಳ್ಳು.
- ಬಿಜೆಪಿ
ಅಲ್ಲದೆ, ‘2012ರಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಹಾಗೂ ಭಾರತ ವಿರೋಧಿ ಉದ್ಯಮಿ ಜಾರ್ಜ್ ಸೊರೋಸ್ ಅವರ ಓಪನ್ ಸೊಸೈಟಿ ಫೌಂಡೇಶನ್ ನಡುವೆ ಭಾರತದ ಮತದಾನ ವ್ಯವಸ್ಥೆ ಪ್ರೇರೇಪಣೆಗೆ ಒಪ್ಪಂದ ನಡೆದಿತ್ತು. ಆ ಬಗ್ಗೆ ಮಾಧ್ಯಮ ವರದಿ ಚಕಾರ ಎತ್ತದೇ ಆಯ್ದ ಭಾಗಗಳನ್ನು ಮಾತ್ರ ಪ್ರಕಟಿಸಿದೆ’ ಎಂದಿದ್ದಾರೆ.
ಉಪರಾಷ್ಟ್ರಪತಿ ಕಿಡಿ:
ಈ ನಡುವೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಾತನಾಡಿ, ‘ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮೇಲೆ ದಾಳಿ ಮಾಡುವವರ ಮುಖವಾಡ ಕಳಚಬೇಕು’ ಎಂದಿದ್ದಾರೆ.
ಬಿಜೆಪಿಯೇ ಹಲವಾರು ವರ್ಷ ವಿಪಕ್ಷದಲ್ಲಿತ್ತು. ಆ ಪಕ್ಷವೂ ವಿದೇಶಿ ಶಕ್ತಿಗಳ ಜತೆ ಶಾಮೀಲಾಗಿ ಸರ್ಕಾರವನ್ನು ಅಸ್ಥಿರ ಮಾಡುವ ಯತ್ನ ಮಾಡಿರಬಹುದಲ್ಲವೆ?’ ಎಂದು ಕಾಂಗ್ರೆಸ್ ವಕ್ತಾರರಾದ ಪವನ್ ಖೇರಾ ಹಾಗೂ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.