ಲೆಫ್ಟಿನೆಂಟ್ ವಿನಯ್ ನರ್ವಾಲ್ ಏ.6ಕ್ಕೆ ನಿಶ್ಚಿತಾರ್ಥ, ಏ.16ಕ್ಕೆ ಮದುವೆ, ಏ.22ಕ್ಕೆ ಸಾವು!

| N/A | Published : Apr 24 2025, 12:02 AM IST / Updated: Apr 24 2025, 05:59 AM IST

ಸಾರಾಂಶ

ಕಳೆದ ವಾರವಷ್ಟೇ ಲೆಫ್ಟಿನೆಂಟ್ ವಿನಯ್ ನರ್ವಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹಿಮಾಂಶಿ ಮದುವೆಯಾಗಿ ವಾರ ಕಳೆಯುವುದರೊಳಗೆ ಪತಿಯನ್ನು ಕಳೆದುಕೊಂಡಿದ್ದಾರೆ.

 ನವದೆಹಲಿ: ಕಳೆದ ವಾರವಷ್ಟೇ ಲೆಫ್ಟಿನೆಂಟ್ ವಿನಯ್ ನರ್ವಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹಿಮಾಂಶಿ ಮದುವೆಯಾಗಿ ವಾರ ಕಳೆಯುವುದರೊಳಗೆ ಪತಿಯನ್ನು ಕಳೆದುಕೊಂಡಿದ್ದಾರೆ. ಸ್ವಿಜರ್ಲೆಂಡ್‌ಗೆ ಹನಿಮೂನ್‌ಗೆ ತೆರಳಬೇಕಿದ್ದ ಜೋಡಿ ರಜೆ ಸಿಗದ ಹಿನ್ನೆಲೆಯಲ್ಲಿ ಕಾಶ್ಮೀರ ಪ್ರವಾಸಕ್ಕೆ ತೆರಳಿ, ಕಹಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ಹರ್ಯಾಣ ಮೂಲದ ನರ್ವಾಲ್ ವಿವಾಹ 2 ತಿಂಗಳ ಹಿಂದಷ್ಟೇ ಹಿಮಾಂಶಿ ಜೊತೆಗೆ ನಿಗದಿಯಾಗಿತ್ತು. ಮದುವೆಗಾಗಿ 40 ದಿನಗಳ ರಜೆ ಹಾಕಿ ಊರಿಗೆ ಮರಳಿದ್ದರು. ಇದೇ ತಿಂಗಳ 4 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಏ.16ರಂದು ಮಸ್ಸೂರಿಯಲ್ಲಿ ಅದ್ಧೂರಿಯಾಗಿ ಡೆಸ್ಟಿನೇಶನ್ ವಿವಾಹವಾಗಿದ್ದರು.ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ಈ ಜೋಡಿ ಸ್ವಿಜರ್ಲೆಂಡ್‌ಗೆ ಹನಿಮೂನ್‌ಗೆ ತೆರಳುವುದಕ್ಕೆ ಬಯಸಿದ್ದರು. ಆದರೆ ವಿದೇಶಕ್ಕೆ ಹೋಗಲು ಅನುಮತಿ ಸಿಗದ ಕಾರಣ ಮಿನಿ ಸ್ವಿಜರ್ಲೆಂಡ್ ಎಂದೇ ಖ್ಯಾತವಾದ ಕಾಶ್ಮೀರ ಪಹಲ್ಗಾಂಗೆ ಮಧುಚಂದ್ರಕ್ಕೆ ಹೋಗಿದ್ದರು. ತರಾತುರಿಯಲ್ಲಿಯೇ ಏ.21ರಂದು ಇಬ್ಬರು ಕಾಶ್ಮೀರ ವಿಮಾನವನ್ನೇರಿದ್ದರು. ಆದರೆ ಅದಾಗಿ ಒಂದು ದಿನ ಕಳೆಯುವಷ್ಟರಲ್ಲೇ ಏ.22ರಂದು ಲೆಫ್ಟಿನೆಂಟ್ ವಿನಯ್ ನರ್ವಾಲ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಪತಿಯನ್ನು ಕಳೆದುಕೊಂಡ ನವವಿವಾಹಿತೆ ರೋದನ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ನೆನೆದು ಅವರ ಪಾರ್ಥಿವ ಶರೀರದ ಎದುರು ಕಣ್ಣೀರು ಹಾಕಿದ್ದು ಎಂಥ ಕಟುಕರ ಎದೆಯನ್ನೂ ಕರಗಿಸುವಂತಿತ್ತು.ಏ.16ರಂದು ಚಂಡೀಗಢ ಮೂಲದ ನರ್ವಾಲ್‌ ಮದುವೆಯಾಗಿದ್ದರು. ಮಧುಚಂದ್ರಕ್ಕೆಂದು ಪಹಲ್ಗಾಂಗೆ ತೆರಳಿದಾಗ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಬಳಿಕ ಅವರ ಶವದ ಪಕ್ಕ ಪತ್ನಿ ಹಿಮಾಂಶಿ ಕುಳಿತ ದೃಶ್ಯ ವೈರಲ್‌ ಆಗಿತ್ತು.

ಕೊಚ್ಚಿಯಲ್ಲಿ ನೌಕಾಧಿಕಾರಿಯಾಗಿದ್ದ ನರ್ವಾಲ್‌ ಅವರ ಶರೀರವನ್ನು ತವರಿಗೆ ಕೊಂಡೊಯ್ಯುವ ಮುನ್ನ ಬುಧವಾರ ದೆಹಲಿಗೆ ತರಲಾಯಿತು. ಅಂತಿಮ ನಮನ ಸಲ್ಲಿಸುವಾಗ ಅವರ ಪತ್ನಿ ಹಿಮಾಂಶಿ ನರ್ವಾಲ್ ಕಣ್ಣೀರು ಹಾಕಿದರು.