ಹಲ್ಲೆ ಮಾಡಿದ್ದೇ ಎನ್‌ಐಎ, ಅದಕ್ಕೆ ಮಹಿಳೆಯರ ತಿರುಗೇಟು: ಮಮತಾ

| Published : Apr 07 2024, 01:51 AM IST / Updated: Apr 07 2024, 05:20 AM IST

ಸಾರಾಂಶ

ಶನಿವಾರ ಪ.ಬಂಗಾಳದ ಭೂಪತಿನಗರದಲ್ಲಿ ಎನ್‌ಐಎ ತಂಡದ ಮೇಲೆ ಸ್ಥಳೀಯರು ನಡೆಸಿದ ದಾಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ‘ಮೊದಲು ಸ್ಥಳೀಯರ ಮೇಲೆ ದೌರ್ಜನ್ಯ ಮಾಡಿದ್ದು ಎನ್‌ಐಎ.

ಕೋಲ್ಕತಾ: ಶನಿವಾರ ಪ.ಬಂಗಾಳದ ಭೂಪತಿನಗರದಲ್ಲಿ ಎನ್‌ಐಎ ತಂಡದ ಮೇಲೆ ಸ್ಥಳೀಯರು ನಡೆಸಿದ ದಾಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ‘ಮೊದಲು ಸ್ಥಳೀಯರ ಮೇಲೆ ದೌರ್ಜನ್ಯ ಮಾಡಿದ್ದು ಎನ್‌ಐಎ. ಇದನ್ನು ಸಹಿಸದೇ ಮಹಿಳೆಯರು ಪ್ರತಿಭಟಿಸಿದ್ದಾರಷ್ಟೇ’ ಎಂದು ಸಮರ್ಥಿಸಿಕೊಂಡಿದ್ದಾರೆ.

ದಕ್ಷಿಣ ದಿನಾಜ್‌ಪುರದಲ್ಲಿ ಶನಿವಾರ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ‘ಎನ್‌ಐಎ ಮಧ್ಯರಾತ್ರಿ ದಾಳಿ ಮಾಡಿದ್ದು ಯಾಕೆ? ಪೊಲೀಸ್ ಅನುಮತಿ ಇದೆಯೇ? ಮಧ್ಯರಾತ್ರಿಯಲ್ಲಿ ಬೇರೆ ಯಾರಾದರೂ ಅಪರಿಚಿತರು ಸ್ಥಳಕ್ಕೆ ಭೇಟಿ ನೀಡಿದರೆ ಸ್ಥಳೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರು ಚುನಾವಣೆಗೆ ಮುನ್ನ ಜನರನ್ನು ಏಕೆ ಬಂಧಿಸುತ್ತಿದ್ದಾರೆ? ಅವರು ಬಿಜೆಪಿಯನ್ನು ಬೆಂಬಲಿಸಲು ಇದೆಲ್ಲವನ್ನೂ ಮಾಡುತ್ತಿದ್ದಾರೆ. ಈ ಬಿಜೆಪಿಯ ಕೊಳಕು ರಾಜಕೀಯದ ವಿರುದ್ಧ ಹೋರಾಡಲು ನಾವು ಇಡೀ ಜಗತ್ತಿಗೆ ಕರೆ ನೀಡುತ್ತೇವೆ‘ ಎಂದು ಬ್ಯಾನರ್ಜಿ ಹೇಳಿದರು.

‘ಎನ್‌ಐಎ ಸಿಬ್ಬಂದಿ ಭೂಪತಿನಗರದ ನಿವಾಸಿಗಳ ಮೇಲೆ ಹಲ್ಲೆ ನಡೆಸಿದರು. ಅದಕ್ಕೆ ಮಹಿಳೆಯರು ಅವರ ವಾಹನ ತಡೆದು ಪ್ರತಿಭಟಿಸಿದರು. ಮಹಿಳೆಯರ ಮೇಲೆ ದಾಳಿ ನಡೆದರೆ ಸುಮ್ಮನೆ ಕೂರುತ್ತಾರಾ? ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಿಡಿಕಾರಿದರು.