ಸಾರಾಂಶ
ನವದೆಹಲಿ: ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜು.16ರಂದು ಗಲ್ಲಿಗೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಯೆಮೆನ್ ದೇಶದ ತಲಾಲ್ ಅಬ್ದೋ ಮೆಹದಿ ಎನ್ನುವವರ ಕೊಲೆ ಪ್ರಕರಣದಲ್ಲಿ ನಿಮಿಷಾಗೆ ಗಲ್ಲು ಶಿಕ್ಷೆಯಾಗಿತ್ತು. ಅವರನ್ನು ಪಾರು ಮಾಡಲು ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್ ಎನ್ನುವವರು ಸರ್ಕಾರ ಮತ್ತು ತಲಾಲ್ ಕುಟುಂಬದ ಜತೆಗೆ ಮಾತುತೆ ನಡೆಸಿದ್ದರೂ ಫಲ ನೀಡಿರಲಿಲ್ಲ. ಈ ನಡುವೆಯೇ ಗಲ್ಲಿಗೆ ದಿನಾಂಕ ನಿಗದಿಯಾಗಿದೆ.
ಪ್ರಕರಣ ಹಿನ್ನೆಲೆ:
ಕೇರಳದ ಪಾಲಕ್ಕಡ್‌ನ ನಿಮಿಷಾ 2011ರಿಂದ ಯೆಮೆನ್‌ನಲ್ಲಿ ನರ್ಸ್ ಆಗಿದ್ದರು. ತಲಾಲ್ ಜೊತೆಗೆ ಸೇರಿ ಕ್ಲಿನಿಕ್ ಆರಂಭಿಸಿದ್ದರು. ಆದರೆ ಇಬ್ಬರ ನಡುವೆ ಮೈಮನಸ್ಸು ಮೂಡಿತು. ಅಲ್ಲದೇ ಆಕೆಯ ಪಾಸ್‌ಪೋರ್ಟ್‌ಗಳನ್ನು ಕೂಡ ವಶದಲ್ಲಿರಿಸಿಕೊಂಡಿದ್ದನು. ಮುನಿಸು ಕೊಲೆ ಹಂತಕ್ಕೆ ಹೋಗಿ 2017ರಲ್ಲಿ ನಿಮಿಷಾ ತಲಾಲ್‌ರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್ 2020ರಲ್ಲಿ ಗಲ್ಲು ವಿಧಿಸಿತ್ತು. 2023ರಲ್ಲಿ ಸುಪ್ರೀಂ ತೀರ್ಪನ್ನು ಎತ್ತಿ ಹಿಡಿದಿತ್ತು. ಕಳೆದ ವರ್ಷ ಯೆಮೆನ್ ಅಧ್ಯಕ್ಷ ಕೂಡ ಶಿಕ್ಷೆ ಜಾರಿಗೆ ಅನುಮೋದನೆ ನೀಡಿದ್ದರು.
ಆ ಬಳಿಕ ಭಾರತದ ವಿದೇಶಾಂಗ ಸಚಿವಾಲಯ ನಿಮಿಷಾ ಕುಟುಂಬಕ್ಕೆ ಎಲ್ಲ ರೀತಿ ನೆರವು ನೀಡುವುದಾಗಿ ಹೇಳಿತ್ತು. ಈ ನಡುವೆಯೇ ಗಲ್ಲಿಗೆ ದಿನಾಂಕ ನಿಗದಿಯಾಗಿದೆ.