ಸಾರಾಂಶ
ಕೇಂದ್ರ ಶಿಕ್ಷಣ ಸಚಿವಾಲಯವು 2025ನೇ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್ ವರ್ಕ್ ವರದಿ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸತತ 10ನೇ ವರ್ಷ ದೇಶದ ನಂ.1 ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ನವದೆಹಲಿ : ಕೇಂದ್ರ ಶಿಕ್ಷಣ ಸಚಿವಾಲಯವು 2025ನೇ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್ ವರ್ಕ್ (ಎನ್‌ಐಆರ್‌ಎಫ್) ವರದಿ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ) ಸತತ 10ನೇ ವರ್ಷ ದೇಶದ ನಂ.1 ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಜೊತೆಗೆ ದೇಶದ ನಂ1. ಅತ್ಯುತ್ತಮ ಸಂಶೋಧನಾ ಸಂಸ್ಥೆ ಗೌರವಕ್ಕೂ ಭಾಜನವಾಗಿದೆ. ಸಮಗ್ರ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.
ಇನ್ನು ಒಟ್ಟಾರೆ ಶಿಕ್ಷಣ ಸಂಸ್ಥೆಗಳ ಪೈಕಿ ಐಐಟಿ ಮದ್ರಾಸ್ ಮೊದಲ ರ್‍ಯಾಂಕ್‌ಗೆ ಭಾಜನವಾಗಿದೆ. ಅತ್ಯುತ್ತಮ ಕಾನೂನು ಕಾಲೇಜುಗಳ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ ರ್‍ಯಾಂಕ್‌ಗೆ ಪಾತ್ರವಾಗಿದೆ. ಮ್ಯಾನೇಜ್‌ಮೆಂಟ್ ಕಾಲೇಜುಗಳ ವಿಭಾಗದಲ್ಲಿ ಐಐಎಂ ಬೆಂಗಳೂರು 2ನೇ ಸ್ಥಾನ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) 3ನೇ ಸ್ಥಾನ, ಮುಕ್ತ ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಎರಡನೇ ಸ್ಥಾನ ದೊರೆತಿದೆ.
ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಪಾರದರ್ಶಕವಾಗಿ ಗುರುತಿಸುವ ಭಾಗವಾಗಿ ಎನ್‌ಐಆರ್‌ಎಫ್ ರ್‍ಯಾಂಕಿಂಗ್ ನೀಡಲಾಗುತ್ತದೆ. ಒಟ್ಟಾರೆ ವಿವಿಗಳು, ಕಾಲೇಜುಗಳು, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಫಾರ್ಮಸಿ, ಡೆಂಟಲ್, ಲಾ, ಮೆಡಿಕಲ್ ಹೀಗೆ ಹಲವು ವಿಭಾಗಗಳಲ್ಲಿ ರ್‍ಯಾಂಕಿಂಗ್ ನೀಡಲಾಗುತ್ತದೆ. ಪಾಠ, ಕಲಿಕೆ ಮತ್ತು ಸಂಪನ್ಮೂಲಗಳು(ಟಿಎಲ್‌ಆರ್), ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ(ಆರ್‌ಪಿ) ಹಾಗೂ ಪದವಿ ಫಲಿತಾಂಶಗಳನ್ನು ರ್‍ಯಾಂಕಿಂಗ್‌ಗೆ ಮಾನದಂಡವಾಗಿ ಬಳಸಲಾಗುತ್ತದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ದೆಹಲಿಯಲ್ಲಿ ಈ ರ್‍ಯಾಂಕಿಂಗ್ ಬಿಡುಗಡೆ ಮಾಡಿದರು.
ಟಾಪ್ ಸಂಸ್ಥೆಗಳು
ಐಐಎಸ್ಸಿ, ಬೆಂಗಳೂರು: ದೇಶದ ನಂ.1 ವಿವಿ. ದೇಶದ ನಂ.1 ಅತ್ಯುತ್ತಮ ಸಂಶೋಧನಾ ಸಂಸ್ಥೆ. ದೇಶದ ನಂ.2 ಸಮಗ್ರ ಶಿಕ್ಷಣ ಸಂಸ್ಥೆ
ಬೆಂಗಳೂರು ಲಾ ಸ್ಕೂಲ್ ಯೂನಿವರ್ಸಿಟಿ : ದೇಶದ ಅತ್ಯುತ್ತಮ ಕಾನೂನು ಕಾಲೇಜುಐಐಎಂ, ಬೆಂಗಳೂರು: ಮ್ಯಾನೇಜ್‌ಮೆಂಟ್ ಕಾಲೇಜುಗಳ ವಿಭಾಗದಲ್ಲಿ ದೇಶಕ್ಕೆ 2ನೇ ಸ್ಥಾನಮಾಹೆ: ಮ್ಯಾನೇಜ್‌ಮೆಂಟ್ ಕಾಲೇಜುಗಳ ಪೈಕಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ಗೆ 2ನೇ ಸ್ಥಾನಮುಕ್ತ ವಿವಿ, ಮೈಸೂರು: ಮುಕ್ತ ವಿಶ್ವವಿದ್ಯಾಲಯಗಳ ಪೈಕಿ ದೇಶಕ್ಕೆ 2ನೇ ಸ್ಥಾನ