ಗ್ರಹಿಕೆ ಪ್ರಜ್ಞೆ ಹೆಚ್ಚಿಸುವ ಶಿಕ್ಷಣ ಅಗತ್ಯ: ಇಶಾ ಫೌಂಡೇಷನ್‌ ಸದ್ಗುರು

| N/A | Published : Sep 05 2025, 02:00 AM IST

ಸಾರಾಂಶ

ಮಕ್ಕಳಲ್ಲಿ ಗ್ರಹಿಕೆ ಪ್ರಜ್ಞೆ ಹೆಚ್ಚಿಸುವ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಇಶಾ ಫೌಂಡೇಷನ್‌ ಸಂಸ್ಥಾಪಕರಾದ ಸದ್ಗುರು ಸಲಹೆ ನೀಡಿದರು.

 ಬೆಂಗಳೂರು :  ಮಕ್ಕಳಲ್ಲಿ ಗ್ರಹಿಕೆ ಪ್ರಜ್ಞೆ ಹೆಚ್ಚಿಸುವ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಇಶಾ ಫೌಂಡೇಷನ್‌ ಸಂಸ್ಥಾಪಕರಾದ ಸದ್ಗುರು ಸಲಹೆ ನೀಡಿದರು.

ರಾಜಾರಾಜೇಶ್ವರಿ ನಗರದ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನ ಹಾಗೂ ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಸ್ಕೂಲ್‌ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳನ್ನು ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ತಯಾರು ಮಾಡುವ ಬದಲು ಗ್ರಹಿಕೆ ಪ್ರಜ್ಞೆ ಹೆಚ್ಚಿಸುವ ಶಿಕ್ಷಣ ನೀಡುವುದು ಇಂದಿನ ಅಗತ್ಯ. ಶಿಕ್ಷಣದಲ್ಲಿ ಕ್ರಿಯಾತ್ಮಕತೆ, ಕುತೂಹಲ ಮತ್ತು ಜಾಗೃತಿ ಇರುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಮಗುವೂ ಮಾದರಿಯಾಗಬೇಕು. ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸುವ ಹಂಬಲ ಮೂಡಿಸಿಕೊಳ್ಳಬೇಕು. ಲೋಕಜ್ಞಾನ ಬೆಳೆಸಿಕೊಂಡು ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹೆಮ್ಮೆಯ ಕ್ಷಣ:

ಸದ್ಗುರು ವೇದಿಕೆಗೆ ಆಗಮಿಸುವ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾನು ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಷ್ಟೇ. ಉಷಾ ಮತ್ತು ಐಶ್ವರ್ಯ ಹೆಗ್ಡೆ ಇದನ್ನು ನೋಡಿಕೊಳ್ಳುತ್ತಿದ್ದಾರೆ. 25 ವರ್ಷ ಪೂರ್ಣಗೊಳಿಸಿರುವುದು ಖುಷಿ ತಂದಿದೆ. ಇದಕ್ಕೆ ಕಾರಣರಾದ ಎಲ್ಲ ಶಿಕ್ಷಕರಿಗೂ ಹೃತ್ಪೂರ್ವಕ ಧನ್ಯವಾದಗಳು. ರಾಮನಗರಕ್ಕೆ ನಾನು ಹೋಗಬೇಕಾಗಿದ್ದು, ಹೆಚ್ಚು ಸಮಯ ಕಾರ್ಯಕ್ರಮದಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಆರಂಭದಲ್ಲೇ ತೆರಳಿದರು.

ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ಮುಖ್ಯಸ್ಥೆ ಐಶ್ವರ್ಯ ಡಿಕೆಎಸ್ ಹೆಗಡೆ ಅವರು ಸಂವಾದ ನಡೆಸಿಕೊಟ್ಟರು.

Read more Articles on