ಸಾರಾಂಶ
ನಾಗ್ಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರಧಾನ ಕಛೇರಿಯ ನೆಲೆಯಾಗಿರುವ ನಾಗ್ಪುರವು ಪಶ್ಚಿಮ ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ, ಇದು ಏ.19 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಈಗ 2 ಸಲ ಸತತವಾಗಿ ಗೆದ್ದಿರುವ ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಖಾತೆ ರಾಜ್ಯ ಸಚಿವ, ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತೆ ಇಲ್ಲಿ ಚುನಾವಣಾ ಪರೀಕ್ಷೆಗೆ ಇಳಿದಿದ್ದಾರೆ ಎಂಬುದು ವಿಶೇಷ.
ನಾಗಪುರದಲ್ಲಿ ಈ ಸಲ ಕಾಂಗ್ರೆಸ್ ಪಕ್ಷ ಹಾಲಿ ಶಾಸಕ ವಿಕಾಸ್ ಠಾಕ್ರೆ ಅವರನ್ನು ಕಣಕ್ಕೆ ಇಳಿಸಿದೆ. ಠಾಕ್ರೆ ಅವರು ಕಾಂಗ್ರೆಸ್-ಶಿವಸೇನೆ (ಉದ್ಧವ್ ಠಾಕ್ರೆ)-ಎನ್‌ಸಿಪಿ (ಶರದ್ ಪವಾರ್ ಬಣ) ಜಂಟಿ ಅಭ್ಯರ್ಥಿಯಾಗಿದ್ದಾರೆ. ಇನ್ನು ಗಡ್ಕರಿ ಅವರು ಬಿಜೆಪಿ-ಶಿವಸೇನೆ (ಶಿಂಧೆ ಬಣ)-ಎನ್‌ಸಿಪಿ (ಅಜಿತ್ ಪವಾರ್ ಬಣ) ಜಂಟಿ ಅಭ್ಯರ್ಥಿ ಆಗಿದ್ದಾರೆ. ಕಳೆದ ಸಲ ಗಡ್ಕರಿ ಅವಿಭಜಿತ ಶಿವಸೇನೆ-ಬಿಜೆಪಿಯ ಜಂಟಿ ಅಭ್ಯರ್ಥಿ ಆಗಿದ್ದರು. ಆದರೆ ಈ ಸಲ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಿವಸೇನೆ-ಎನ್‌ಸಿಪಿ ಒಡೆದಿವೆ. ಈ ಎರಡೂ ಪಕ್ಷಗಳ ಹೋಳಾಗಿ ಒಂದು ಬಣ ಬಿಜೆಪಿ ಹಾಗೂ ಇನ್ನೊಂದು ಬಣ ಕಾಂಗ್ರೆಸ್‌ನತ್ತ ವಾಲಿವೆ. ಹೀಗಾಗಿ ಚುನಾವಣೆ ಸಹಜವಾಗೇ ಚುನಾವಣೆ ಕುತೂಹಲ ಕೆರಳಿಸಿದೆ,
ನಾಗಪುರಕ್ಕೆ ಗಡ್ಕರಿ ಕೊಡುಗೆ:
ನಾಗಪುರ ನಗರಕ್ಕೆ ಗಡ್ಕರಿ ಅವಧಿಯಲ್ಲಿ ₹1 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯ ಯೋಜನೆ. ನಾಗ್ಪುರದಲ್ಲಿ ಮಲ್ಟಿ-ಮಾಡೆಲ್ ಇಂಟರ್‌ನ್ಯಾಷನಲ್ ಪ್ಯಾಸೆಂಜರ್ ಮತ್ತು ಕಾರ್ಗೋ ಹಬ್ ಏರ್‌ಪೋರ್ಟ್ ಸ್ಥಾಪನೆ. ಇದರಿಂದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿ, ಜಿಲ್ಲೆಯ ಮೂಲಸೌಕರ್ಯವನ್ನು ಹೆಚ್ಚಿಸಲು ರಸ್ತೆಗಳು ಮತ್ತು ಮೇಲ್ಸೇತುವೆಗಳ ನಿರ್ಮಾಣ. ಇವು ಗಡ್ಕರಿ ಅವರ ಕೊಡುಗೆ.
ಈ ಹಿಂದಿನ ಚುನಾವಣೆ:
ಪ್ರಮುಖವಾಗಿ 7 ಬಾರಿಯ ಕಾಂಗ್ರೆಸ್ ಸಂಸದ ವಿಲಾಸ್ ಮುತ್ತೇಮ್ವಾರ್ ಮತ್ತು ಕಾಂಗ್ರೆಸ್ ನಾಯಕ ನಾನಾ ಪಟೋಲೆ (2.85 ಲಕ್ಷ ಮತಗಳಿಂದ) ಅವರಂತಹ ಅಸಾಧಾರಣ ಎದುರಾಳಿಗಳ ವಿರುದ್ಧ ಗಡ್ಕರಿ 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು ಎಂಬುದು ವಿಶೇಷ.
2014ರಲ್ಲಿ ವಿಲಾಸ್ ಮುತ್ತೇಮ್ವಾರ್ ವಿರುದ್ಧ 2.85 ಲಕ್ಷಕ್ಕೂ ಹೆಚ್ಚು ಮತಗಳಿಂದ ಹಾಗೂ 2019ರಲ್ಲಿ ಪಟೋಲೆ ವಿರುದ್ಧ 2.16 ಲಕ್ಷ ಮತಗಳಿಂದ ಅವರು ಗೆದ್ದಿದ್ದರು.
12 ಸಲ ಕಾಂಗ್ರೆಸ್, 2 ಸಲ ಬಿಜೆಪಿ:
1952 ರಿಂದ, ನಾಗ್ಪುರದ ಲೋಕಸಭಾ ಸ್ಥಾನವನ್ನು ಉಪಚುನಾವಣೆ ಸೇರಿದಂತೆ 12 ಅವಧಿಗೆ ಕಾಂಗ್ರೆಸ್ ವಶಪಡಿಸಿಕೊಂಡಿದೆ. ಆದರೆ 2014 ಹಾಗೂ 2019ರಲ್ಲಿ ಬಿಜೆಪಿಯ ನಿತಿನ್ ಗಡ್ಕರಿ ಕಾಂಗ್ರೆಸ್ ಭದ್ರಕೋಟೆಯನ್ನು ಸತತ 2 ಬಾರಿ ಭೇದಿಸಿ ಹ್ಯಾಟ್ರಿಕ್‌ಗೆ ಎದುರು ನೋಡುತ್ತಿದ್ದಾರೆ.
ಚುನಾವಣಾ ವಿಷಯಗಳು:
- ಗಡ್ಕರಿ ಪಾಲಿಗೆ ನಾಗಪುರಕ್ಕೆ ತಂದಿರುವ ಕೇಂದ್ರ ಸರ್ಕಾರದ 1 ಲಕ್ಷ ಕೋಟಿ ರು. ಮೂಲಸೌಕರ್ಯವೇ ಚುನಾವಣಾ ವಿಷಯ
- ಜತೆಗೆ ಮತ್ತೆ ಮೋದಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದು ಹ್ಯಾಟ್ರಿಕ್ ಸಾಧಿಸುವ ಹಂಬಲ
- ವಿಪಕ್ಷಗಳ ಪಾಲಿಗೆ ಬೆಲೆ ಏರಿಕೆ, ನಾಗಪುರ ಒಳಗೊಂಡ ವಿದರ್ಭದ ಬರಗಾಲ, ರೈತರ ಆತ್ಮಹತ್ಯೆ, ನಿರುದ್ಯೋಗ, ಶಿವಸೇನೆಯನ್ನು ಬಿಜೆಪಿ ಒಡೆದಿದ್ದು ಚುನಾವಣಾ ವಿಷಯ.