ಇಂಡಿಯಾ, ರಾಹುಲ್‌, ತೇಜಸ್ವಿ ವಿರುದ್ಧ ನಿತೀಶ್‌ ವಾಗ್ದಾಳಿ

| Published : Feb 01 2024, 02:02 AM IST / Updated: Feb 01 2024, 11:58 AM IST

ಇಂಡಿಯಾ, ರಾಹುಲ್‌, ತೇಜಸ್ವಿ ವಿರುದ್ಧ ನಿತೀಶ್‌ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈತ್ರಿಗೆ ನಾನು ಬೇರೆ ಹೆಸರು ಸೂಚಿಸಿದ್ದೆ, ಅವರು ಒಪ್ಪಲಿಲ್ಲ. ತೇಜಸ್ವಿ ಯಾದವ್‌ ಬಚ್ಚಾ, ಅವನಿಗೆ ಜೆಡಿಯು ಸಾಧನೆ ಗೊತ್ತಿಲ್ಲ. ಜಾತಿ ಗಣತಿಗೆ ರಾಹುಲ್‌ ಸುಳ್ಳು ಕ್ರೆಡಿಟ್‌ ತೆಗೆದುಕೊಳ್ಳುತ್ತಿದ್ದಾರೆ ಎಂದು ನಿತೀಶ್‌ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ಪಟನಾ: ಇಂಡಿಯಾ ಮೈತ್ರಿಕೂಟ ತೊರೆದು ಎನ್‌ಡಿಎ ಸೇರ್ಪಡೆಯಾದ ಬಳಿಕ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಬುಧವಾರ ಇಂಡಿಯಾ ಮೈತ್ರಿಕೂಟ, ರಾಹುಲ್‌ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.‘ನಾನು ಮೈತ್ರಿಕೂಟಕ್ಕೆ ಬೇರೆ ಹೆಸರು ಸೂಚಿಸಿದ್ದೆ. ಆದರೆ ಅವರು ಇಂಡಿಯಾ ಎಂದು ಹೆಸರಿಟ್ಟರು. ಅದರಿಂದ ಈಗ ನನಗೇನಾಗಬೇಕಿದೆ? ಮೈತ್ರಿಕೂಟದ ಯಶಸ್ಸಿಗೆ ನಾನು ಎಷ್ಟೆಲ್ಲಾ ಕೆಲಸ ಮಾಡಿದೆ. ಆದರೆ ಬೇರೆ ಪಕ್ಷಗಳೆಲ್ಲ ಸುಮ್ಮನೆ ಕುಳಿತಿದ್ದವು. ಸೀಟು ಹಂಚಿಕೆ ಮಾಡಿ ಎಂದು ನಾನು ಎಷ್ಟು ಕೇಳಿಕೊಂಡರೂ ಮಾಡಲಿಲ್ಲ. ಆದ್ದರಿಂದಲೇ ಮೈತ್ರಿಕೂಟ ತೊರೆದೆ’ ಎಂದು ಹೇಳಿದ್ದಾರೆ.ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಒಬ್ಬ ಬಚ್ಚಾ. ಬಿಹಾರಕ್ಕಾಗಿ ಜೆಡಿಯು ಏನು ಮಾಡಿದೆ ಎಂಬುದು ಅವನಿಗೆ ಗೊತ್ತಿಲ್ಲ ಎಂದೂ ಕಿಡಿಕಾರಿದ್ದಾರೆ.ಇದೇ ವೇಳೆ, ಬಿಹಾರದಲ್ಲಿ ನಡೆದ ಜಾತಿಗಣತಿಯ ಕ್ರೆಡಿಟ್‌ ತೆಗೆದುಕೊಳ್ಳಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಬಿಹಾರದಲ್ಲಿ ಜಾತಿ ಗಣತಿ ನಡೆದಿದ್ದು ಯಾವಾಗ ಎಂಬುದೇ ರಾಹುಲ್‌ಗೆ ಮರೆತುಹೋಗಿದೆ. 2019-20ನೇ ಸಾಲಿನಲ್ಲಿ 9 ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ನಾನು ಜಾತಿ ಗಣತಿ ನಡೆಸಿದೆ. ಆದರೆ ರಾಹುಲ್‌ ಗಾಂಧಿ ಸುಳ್ಳು ಕ್ರೆಡಿಟ್‌ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ನಾನೇನು ಮಾಡಲು ಸಾಧ್ಯ? ತೆಗೆದುಕೊಳ್ಳಲಿ ಬಿಡಿ’ ಎಂದು ಹೇಳಿದ್ದಾರೆ.