ಸಾರಾಂಶ
ನವದೆಹಲಿ: ಸೌಂದರ್ಯ ಸ್ಪರ್ಧೆಯಾದ ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ಒಬ್ಬ ದಲಿತ ಅಥವಾ ಆದಿವಾಸಿ ಮಹಿಳೆಯ ಹೆಸರಿಲ್ಲ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಇಂತಹ ಯೋಚನೆಗಳು ಕೇವಲ ‘ಬಾಲ ಬುದ್ಧಿ’ ಉಳ್ಳವರಿಗೆ ಬರಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
‘ಮಿಸ್ ಇಂಡಿಯಾ ಸ್ಪರ್ಧೆ, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರಗಳು ಸರ್ಕಾರದ ಕೈಲಿಲ್ಲ. ಅಲ್ಲೂ ರಾಹುಲ್ ಮೀಸಲಾತಿ ಬಯಸಿದ್ದಾರೆ. ಇದಕ್ಕೆ ಬಾಲಬುದ್ಧಿ ಮಾತ್ರವಲ್ಲ, ಅವರನ್ನು ಪ್ರೋತ್ಸಾಹಿಸುವವರೂ ಸಹ ಅಷ್ಟೇ ಜವಾಬ್ದಾರರು. ನಿಮ್ಮ ವಿಭಜಕ ನೀತಿಗಳಿಗಾಗಿ ಹಿಂದುಳಿದ ವರ್ಗಗಳನ್ನು ಅಣಕಿಸಬೇಡಿ’ ಎಂದು ರಿಜಿಜು ಕಿಡಿ ಕಾರಿದ್ದಾರೆ.
ಜೊತೆಗೆ, ದ್ರೌಪದಿ ಮುರ್ಮು ಬುಡಕಟ್ಟು ಜನಾಂಗಕ್ಕೆ ಸೇರಿದ ಮೊದಲ ರಾಷ್ಟ್ರಪತಿ. ಮೋದಿ ಒಬಿಸಿಗೆ ಸಮುದಾಯಕ್ಕೆ ಸೇರಿದವರು ಹಾಗೂ ಸಚಿವ ಸಂಪುಟದಲ್ಲಿಯೂ ಎಸ್‌ಸಿ, ಎಸ್ಟಿಗೆ ಸೇರಿದ ಹಲವರಿದ್ದಾರೆ ಎಂದು ರಿಜಿಜು ಹೇಳಿದರು.
==
ತಿರುಮಲ: ನೀರಿನ ಬರ ನೀಗಿಸಲು ಟಿಟಿಡಿ ಕ್ರಮ
ತಿರುಮಲ: ಮುಂಗಾರು ಮಳೆಯ ಕೊರತೆಯಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಆಂಧ್ರಪ್ರದೇಶದ ತಿರುಮಲಕ್ಕೆ ನೀರು ಪೂರೈಕೆ ಮಾಡುವ ಡ್ಯಾಮ್‌ಗಳಲ್ಲಿ ಈ ಬಾರಿ ಸಾಕಷ್ಟು ನೀರು ಸಂಗ್ರಹವಾಗದೆ ತೀವ್ರ ಸಮಸ್ಯೆ ಉಂಟಾಗಿದೆ. ಹೀಗಾಗಿ ನೀರಿನ ಅಭಾವ ನೀಗಿಸಲು ಚಂದ್ರಗಿರಿಯ ಕಲ್ಯಾಣಿ ಡ್ಯಾಮ್‌ನಿಂದ ನಿತ್ಯ 25 ಲಕ್ಷ ಗ್ಯಾಲನ್ ನೀರು ಪಡೆಯಲು ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ನಿರ್ಧರಿಸಿದೆ.
ತಿರುಮಲಕ್ಕೆ ಪ್ರತಿನಿತ್ಯ 42 ಲಕ್ಷ ಗ್ಯಾಲನ್ ನೀರು ಬೇಕಾಗುತ್ತದೆ. ಇಲ್ಲಿಗೆ ನೀರು ಪೂರೈಸುವ ಎಲ್ಲಾ ಡ್ಯಾಮ್‌ಗಳಲ್ಲಿ ಸದ್ಯಕ್ಕೆ ಒಟ್ಟಾರೆ 4592 ಲಕ್ಷ ಗ್ಯಾಲನ್ ಮಾತ್ರ ನೀರಿದೆ. ಇದು 130 ದಿನಗಳಿಗೆ ಸಾಕಾಗುತ್ತದೆ. ಕಲ್ಯಾಣಿ ಡ್ಯಾಮ್‌ನಲ್ಲಿ 5608 ಲಕ್ಷ ಗ್ಯಾಲನ್ ನೀರಿದೆ. ಅಲ್ಲಿಂದ ನಿತ್ಯ 25 ಲಕ್ಷ ಗ್ಯಾಲನ್ ನೀರು ತರಲು ನಿರ್ಧರಿಸಲಾಗಿದೆ.ಇನ್ನು, ಕೈಲಾಸಗಿರಿ ಡ್ಯಾಮ್‌ನಿಂದ ತಿರುಮಲಕ್ಕೆ ನೀರು ತರಲು 40 ಕೋಟಿ ರು. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ.
ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಉತ್ತಮ ಹಿಂಗಾರು ಮಳೆಯಾಗುವ ನಿರೀಕ್ಷೆಯಿದ್ದು, ಆಗ ಪರಿಸ್ಥಿತಿ ಸುಧಾರಿಸಬಹುದು ಎಂದು ಟಿಟಿಡಿ ವಿಶ್ವಾಸ ವ್ಯಕ್ತಪಡಿಸಿದೆ
==
ಭಗವದ್ಗೀತೆ ಬೋಧಿಸಿದಂತೆ ನಟ ನಾಗಾರ್ಜುನ ಅಕ್ರಮ ಕಟ್ಟಡ ಧ್ವಂಸ
ಹೈದ್ರಾಬಾದ್: ನಟ ನಾಗಾರ್ಜುನಗೆ ಸೇರಿದ ಹೈದ್ರಾಬಾದ್‌ನಲ್ಲಿನ ಅಕ್ರಮ ಕಟ್ಟಡ ಧ್ವಂಸವನ್ನು ಸಮರ್ಥಿಸಿಕೊಂಡಿರುವ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಇದಕ್ಕೆ ಭಗವದ್ಗೀತೆಯ ಶ್ಲೋಕವನ್ನು ಉದಾಹರಣೆಯಾಗಿ ನೀಡಿದ್ದಾರೆ. ಅಲ್ಲದೆ ಕೆರೆ ಮತ್ತು ನೈಸರ್ಗಿಕ ಸಂಪತ್ತನ್ನು ಯಾರೇ ಅತಿಕ್ರಮಣ ಮಾಡಿದ್ದರೂ ಸುಮ್ಮನೆ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.
ಕಾನೂನು ಬಾಹಿರವಾಗಿ ಕಟ್ಟಡ ಧ್ವಂಸಗೊಳಿಸಲಾಗಿದೆ ಎಂಬ ನಟ ನಾಗಾರ್ಜುನ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ರೇವಂತ್ ರೆಡ್ಡಿ, ‘ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಬೋಧನೆಯಂತೆ ಕಾಂಗ್ರೆಸ್ ಸರ್ಕಾರ ಕೆರೆ ದಂಡೆ ಮೇಲೆ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ಧ್ವಂಸಗೊಳಿಸಿದೆ. ಪ್ರಭಾವಿ ವ್ಯಕ್ತಿಗಳು ಇಂಥ ಕಟ್ಟಡ ಹೊಂದಿರುವ ಕಾರಣ ಅದರ ತೆರವಿಗೆ ಸಾಕಷ್ಟು ಒತ್ತಡ ಇರುತ್ತದೆ. ಆದರೆ ಇದು ಭವಿಷ್ಯದ ಪ್ರಶ್ನೆ. ಶ್ರೀಕೃಷ್ಣ ಧರ್ಮಕ್ಕೆ ಜಯವಾಗಬೇಕು, ಅಧರ್ಮಕ್ಕೆ ಸೋಲಾಗಬೇಕು ಎಂದು ಹೇಳಿದ್ದಾನೆ. ಅದರಂತೆ ನಾವು ನಡೆದುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.
==
ಜಮಾತ್-ಎ-ಇಸ್ಲಾಮಿ ನಿಷೇಧ ತೆರವುಗೊಳಿಸಿ: ಮುಫ್ತಿ ಆಗ್ರಹ
ಶ್ರೀನಗರ: ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಜಮಾತ್-ಎ-ಇಸ್ಲಾಮಿ ಭಾಗವಹಿಸಲು ಇಚ್ಛಿಸಿರುವುದು ಒಳ್ಳೆಯ ಹೆಜ್ಜೆಯಾಗಿದ್ದು, ಅದರ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಆಗ್ರಹಿಸಿದೆ.‘ರ್‍ಯಾಲಿ ನಡೆಸಿ, ಮಸೀದಿಗಳಿಗೆ ಕಲ್ಲೆಸೆದು, ಮುಸ್ಲಿಮರನ್ನು ಕೊಂದು ದೇಶದಲ್ಲಿ ವಿಷವನ್ನು ಹರಡುತ್ತಿರುವ ಕೋಮು ಸಂಘಟನೆಗಳನ್ನು ನಿಷೇಧಿಸದ ಸರ್ಕಾರ, ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿ, 2014ರ ಪ್ರವಾಹ ಮತ್ತು ಕೋವಿಡ್ ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಿದ ಜಮಾತ್-ಎ-ಇಸ್ಲಾಮಿಯನ್ನು ನಿಷೇಧಿಸಿದೆ. ಈ ನಿಷೇಧ ತೆರವುಗೊಳಿಸಬೇಕು’ ಎಂದು ಮುಫ್ತಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಜಮಾತ್-ಎ-ಇಸ್ಲಾಮಿಯ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಇತ್ತ ಒಂಟಿಯಾಗೂ ಸ್ಪರ್ಧಿಸಲು ನಿರ್ಧರಿಸಿರುವ ಪಿಡಿಪಿ ನಿರ್ಧರಿಸಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿರುವುದಾಗಿ ಮುಫ್ತಿ ಹೇಳಿದ್ದಾರೆ.
==
ಬಿಹಾರದ ಎಲ್ಲ 243 ಕ್ಷೇತ್ರದಲ್ಲೂ ನಮ್ಮ ಪಕ್ಷ ಸ್ಪರ್ಧೆ: ಪ್ರಶಾಂತ್ ಕಿಶೋರ್
ಪಟನಾ: 2025ರಲ್ಲಿ ನಡೆಯಲಿರುವ ಬಿಹಾರದ ವಿಧಾನಸಭಾ ಚುನಾವಣೆಯ ಎಲ್ಲ 243 ಸ್ಥಾನಗಳಲ್ಲೂ ಜನ್ ಸುರಾಜ್ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ಮುಖ್ಯಸ್ಥ ಹಾಗೂ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.ಭಾನುವಾರ ಮಾತನಾಡಿದ ಅವರು, ನಮ್ಮ ಪಕ್ಷದಿಂದ 40 ಮಂದಿ ಮಹಿಳೆಯರು ಸ್ಪರ್ಧೆ ಮಾಡಲಿದ್ದಾರೆ. 2030ರ ಚುನಾವಣೆ ವೇಳೆಗೆ ಆ ಸಂಖ್ಯೆ 70 ರಿಂದ 80ಕ್ಕೇರಿಕೆ ಆಗಲಿದೆ. ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ ಯಾರೂ ಕೆಲಸಕ್ಕಾಗಿ ಬಿಹಾರವನ್ನು ಬಿಟ್ಟು ಬೇರೆ ಕಡೆ ವಲಸೆ ಹೋಗಬೇಕಿಲ್ಲ ಎಂದರು.
ಇತ್ತೀಚೆಗೆ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ್ದ ಪ್ರಶಾಂತ್ ಕಿಶೋರ್ ತಮ್ಮ ಹೊಸ ಪಕ್ಷ ‘ಜನ್ ಸುರಾಜ್’ ಅನ್ನು ಅ.2ರ ಗಾಂಧಿ ಜಯಂತಿಯಂದು ಸ್ಥಾಪಿಲಿದ್ದಾರೆ.
==
ಶಾಂಘೈ ಶೃಂಗಕ್ಕೆ ಪಾಕ್‌ನಿಂದ ಪ್ರಧಾನಿ ಮೋದಿಗೆ ಆಹ್ವಾನ
ನವದೆಹಲಿ: ಅ.15-16ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಶೃಂಗಕ್ಕೆ ಆಗಮಿಸುವಂತೆ ಪಾಕಿಸ್ತಾನ ಪ್ರಧಾನಿ ನರೇಂದ್ರ ಮೊದಿ ಅವರನ್ನು ಆಹ್ವಾನಿಸಿದೆ. ಆದರೆ ಎರಡೂ ದೇಶಗಳ ನಡುವೆ ಇರುವ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣ ಮೋದಿ ತಾವು ಹೋಗುವ ಬದಲು ತಮ್ಮ ಪ್ರತಿನಿಧಿಯಾಗಿ ಮಂತ್ರಿಯೊಬ್ಬರನ್ನು ಕಳಿಸುವ ಸಾಧ್ಯತೆಯಿದೆ.
ಈ ಬಾರಿ ಶಾಂಘೈ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಪಾಕಿಸ್ತಾನ ನಿಯಮದಂತೆ ಈ ಆಮಂತ್ರಣ ಕಳಿಸಿದೆ. ಇತ್ತೀಚೆಗೆ ಜಮ್ಮುವಿನಲ್ಲಿ ಹೆಚ್ಚಾಗುತ್ತಿರುವ ಉಗ್ರದಾಳಿ ಹಾಗೂ ಕಾಶ್ಮೀರ ವಿವಾದಗಳ ನಡುವೆ ಪಾಕಿಸ್ತಾನದಲ್ಲಿ ಸಭೆ ನಡೆಯುತ್ತಿದ್ದು, ಭಾರತ ಸರ್ಕಾರ ಈ ಕುರಿತು ತನ್ನ ನಿಲುವನ್ನು ಬಹಿರಂಗಪಡಿಸಿಲ್ಲ.ಈ ಮೊದಲು ಕಜಕಿಸ್ತಾನ್ ಹೊರತುಪಡಿಸಿ ಬೆರೆಲ್ಲಾ ದೇಶಗಳು ಆಯೋಸಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.