ಸಾರಾಂಶ
ಇಸ್ಲಾಮಾಬಾದ್: ಪಹಲ್ಗಾಂ ದಾಳಿಯ ಮೂಲಕ ಭಾರತದ ಆಕ್ರೋಶಕ್ಕೆ ತುತ್ತಾಗಿದ್ದ ಪಾಕಿಸ್ತಾನ ಇದೀಗ ಮತ್ತೆ ಭಾರತದ ವಿರುದ್ಧ ರಾಜತಾಂತ್ರಿಕ ಸಮರ ಆರಂಭಿಸಿದೆ.
ತನ್ನ ದೇಶದಲ್ಲಿನ ಭಾರತದ ದೂತವಾಸ ಕಚೇರಿ, ರಾಯಭಾರಿಗಳು ಹಾಗೂ ಭಾರತೀಯ ದೂತಾವಾಸ ಸಿಬ್ಬಂದಿಗಳ ನಿವಾಸಗಳಿಗೆ ದಿನಪತ್ರಿಕೆ, ಕುಡಿವ ನೀರು, ಗ್ಯಾಸ್ ಪೂರೈಕೆ ನಿಲ್ಲಿಸುವಂತೆ ಪಾಕ್ ಸರ್ಕಾರ ಆದೇಶಿಸಿದೆ.
ಭಾರತವು ಸಿಂಧು ನದಿ ನೀರನ್ನು ನಿಲ್ಲಿಸಿದ ಬಳಿಕ ಪಾಕ್ ಕೊತಕೊತ ಕುದಿಯುತ್ತಿತ್ತು. ಇದಕ್ಕೆ ಪ್ರತಿಯಾಗಿ ಈಗ ಸೇಡಿನ ಕ್ರಮ ಕೈಗೊಂಡು, ಭಾರತದ ರಾಯಭಾರಿಗಳಿಗೆ ಮೂಲಸೌಕರ್ಯವನ್ನೇ ಕಡಿತಗೊಳಿಸಿದೆ. ಈ ಮೂಲಕ ರಾಜತಾಂತ್ರಿಕ ನಿಯಮಗಳನ್ನೂ ಉಲ್ಲಂಘಿಸಿದೆ ಎಂದು ವರದಿಗಳು ಹೇಳಿವೆ.
ಮೂಲಗಳ ಪ್ರಕಾರ, ಪಾಕ್‌ನಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ಭಾರತೀಯ ರಾಯಭಾರಿಗಳ ನಿವಾಸಗಳಿಗೆ ದಿನಪತ್ರಿಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಬಳಿಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ನಿವಾಸಿಗಳಿಗೆ ಗ್ಯಾಸ್ ಮತ್ತು ನೀರು ಪೂರೈಸಕೂಡದು ಎಂದು ಸ್ಥಳೀಯ ಮಾರಾಟಗಾರರಿಗೆ ಆದೇಶಿಸಿದೆ. ಗ್ಯಾಸ್ ಪೈಪ್‌ಲೈನ್ ಹಾಕಿರುವ ಸುಯಿ ನಾರ್ದರ್ನ್ ಗ್ಯಾಸ್ ಪೈಪ್‌ಲೈನ್ಸ್ ಲಿಮಿಟೆಡ್‌ಗೆ ಪೂರೈಕೆ ಸ್ಥಗಿತಕ್ಕೆ ಸೂಚಿಸಲಾಗಿದೆ. ನಲ್ಲಿ ನೀರು ಕುಡಿಯಲು ಅಸುರಕ್ಷಿತ ಎಂದು ಭಾರತೀಯ ಸಿಬ್ಬಂದಿ, ಸ್ಥಳೀಯ ಮಾರಾಟಗಾರರಿಂದ ಮಿನರಲ್ ವಾಟರ್ ತರಿಸಿಕೊಳ್ಳುತ್ತಿದ್ದರು. ಈ ಮಾರಾಟಗಾರರಿಗೆ ಈಗ ಭಾರತೀಯರಿಗೆ ಸಹಕರಿಸಬೇಡಿ ಎಂದು ಪಾಕ್ ಸರ್ಕಾರ ಆದೇಶಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಇದಕ್ಕೆ ಪ್ರತ್ಯುತ್ತರವಾಗಿ ಇತ್ತ ಭಾರತ ಕೂಡ ನವದೆಹಲಿಯಲ್ಲಿರುವ ಪಾಕ್ ರಾಜತಾಂತ್ರಿಕ ಕಚೇರಿಗೆ ದಿನಪತ್ರಿಕೆ ಪೂರೈಕೆ ನಿಲ್ಲಿಸಿದೆ ಎಂದು ವರದಿ ಹೇಳಿದೆ.
ಆಪರೇಷನ್ ಸಿಂದೂರ ಬಳಿಕ ಭಾರತ ಹಾಗೂ ಪಾಕ್, ಹಲವು ರಾಯಭಾರ ಕಚೇರಿ ಸಿಬ್ಬಂದಿಗಳನ್ನು ಪರಸ್ಪರ ಉಚ್ಚಾಟಿಸಿಕೊಂಡಿದ್ದವು. ಆದರೂ ಕೆಲವರು ಇನ್ನೂ ಉಭಯ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಹಲ್ಗಾಂ ದಾಳಿ ಬಳಿಕ ಸಿಂದೂ ನದಿ ನೀರಿನ ಹರಿವು ಸ್ಥಗಿತಕ್ಕೆ ಆಕ್ರೋಶಗೊಂಡಿದ್ದ ಪಾಕಿಸ್ತಾನ
ಸ್ವಲ್ಪ ದಿನ ತಣ್ಣಗಿದ್ದು ಇದೀಗ ತನ್ನ ದೇಶದಲ್ಲಿನ ಭಾರತೀಯ ಸಿಬ್ಬಂದಿ ವಿರುದ್ಧ ಸೇಡಿನ ಕ್ರಮ
ರಾಯಭಾರ ಸಿಬ್ಬಂದಿ ಮನೆ, ಕಚೇರಿಗೆ ಪತ್ರಿಕೆ, ನೀರು, ಅನಿಲ ಸರಬರಾಜ್ ಬಂದ್‌ಗೆ ಸೂಚನೆ
ಮೂಲಭೂತ ಸೌಕರ್ಯ ನಿರಾಕರಿಸುವ ಮೂಲಕ ಮತ್ತೆ ರಾಜತಾಂತ್ರಿಕ ನಿಯಮ ಉಲ್ಲಂಘನೆ