ಅಲಹಾಬಾದ್‌ ಹೈಕೋರ್ಟ್‌ ವಿವಾದಿತ ತೀರ್ಪಿನ ಬಗ್ಗೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಆಕ್ಷೇಪ

| N/A | Published : Mar 22 2025, 02:01 AM IST / Updated: Mar 22 2025, 04:55 AM IST

ಸಾರಾಂಶ

ಪೈಜಾಮದ ಲಾಡಿ ಬಿಚ್ಚುವುದು ರೇಪ್‌ ಯತ್ನ ಅಲ್ಲ ಎಂಬ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶರ ಅಭಿಪ್ರಾಯಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಪೈಜಾಮದ ಲಾಡಿ ಬಿಚ್ಚುವುದು ರೇಪ್‌ ಯತ್ನ ಅಲ್ಲ ಎಂಬ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶರ ಅಭಿಪ್ರಾಯಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಆದೇಶಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತವೆ ಎಂದಿರುವ ಅವರು, ಈ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಆಗ್ರಹಿಸಿದ್ದಾರೆ.

ಸಚಿವೆಯ ಹೇಳಿಕೆಗೆ ಇತರೆ ಮಹಿಳಾ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿದೆ. ಇದು ದುರದೃಷ್ಟಕರ. ಆದೇಶದಲ್ಲಿ ನೀಡಿದ ಅಭಿಪ್ರಾಯ ನೋಡಿ ಆಘಾತವಾಗಿದೆ. ಆ ಇಬ್ಬರು ಯುವಕರ ಕೃತ್ಯ ಹೇಗೆ ರೇಪ್‌ ಯತ್ನ ಆಗಲ್ಲ? ಈ ತೀರ್ಪಿನ ಹಿಂದಿನ ತರ್ಕ ಅರ್ಥ ಆಗುತ್ತಿಲ್ಲ. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಆಪ್‌ ನಾಯಕಿ ಸ್ವಾತಿ ಮಲಿವಾಲ್‌ ಹೇಳಿದ್ದಾರೆ.

ಆಪ್ರಾಪ್ತ ಬಾಲಕಿಯ ವಸ್ತ್ರ ಕಳಚಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಉತ್ತರಪ್ರದೇಶದ ಸ್ಥಳೀಯ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರದ ಯತ್ನ ಕಠಿಣ ಕಾಯ್ದೆಯಡಿ ನೋಟಿಸ್‌ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಆರೋಪಿಗಳ ಮೇಲೆ ಹೊರಿಸಿದ ಕಾಯ್ದೆ ಸರಿಯಲ್ಲ, ಅತ್ಯಾಚಾರದ ಪ್ರಯತ್ನಕ್ಕು, ಅತ್ಯಾಚಾರದ ಸಿದ್ಧತೆಗೂ ವ್ಯತ್ಯಾಸವಿದೆ ಎಂದು ಹೇಳಿ ಆರೋಪಿಗಳ ಮೇಲೆ ಬೇರೆ ಕಾಯ್ದೆ ಹೊರಿಸಲು ಸೂಚಿಸಿತ್ತು.