ತುರ್ತುಪರಿಸ್ಥಿತಿಯ ಕುರಿತಾದ 'ಎಮರ್ಜೆನ್ಸಿ' ಚಿತ್ರ ಬಿಡುಗಡೆಗೆ ಸೆನ್ಸಾರ್‌ ಮಂಡಳಿಗೆ ಸೂಚನೆ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಣೆ

| Published : Sep 05 2024, 12:35 AM IST / Updated: Sep 05 2024, 04:40 AM IST

ತುರ್ತುಪರಿಸ್ಥಿತಿಯ ಕುರಿತಾದ 'ಎಮರ್ಜೆನ್ಸಿ' ಚಿತ್ರ ಬಿಡುಗಡೆಗೆ ಸೆನ್ಸಾರ್‌ ಮಂಡಳಿಗೆ ಸೂಚನೆ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತುರ್ತುಪರಿಸ್ಥಿತಿಯ ಕಥೆ ಹೊಂದಿರುವ ಹಾಗೂ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ಕಾಣಿಸಿಕೊಂಡಿರುವ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ಸೆನ್ಸಾರ್‌ ಮಂಡಳಿಗೆ ಸೂಚನೆ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ.

 ಮುಂಬೈ : ತುರ್ತುಪರಿಸ್ಥಿತಿಯ ಕಥೆ ಹೊಂದಿರುವ ಹಾಗೂ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ಕಾಣಿಸಿಕೊಂಡಿರುವ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ಸೆನ್ಸಾರ್‌ ಮಂಡಳಿಗೆ ಸೂಚನೆ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ. 

ಹೀಗಾಗಿ ಸೆ.6ರಂದು ಚಿತ್ರ ಬಿಡುಗಡೆಗೆ ಯೋಚಿಸಿದ್ದ ಚಿತ್ರ ತಂಡಕ್ಕೆ ನಿರಾಸೆ ಆಗಿದೆ.ಚಿತ್ರದ ನಿರ್ಮಾಪಕ ಸಂಸ್ಥೆಯಾದ ‘ಝೀ ಎಂಟರ್‌ಟೇನ್‌ಮೆಂಟ್‌’, ಎಮರ್ಜೆನ್ಸಿ ಸಿನಿಮಾದ ಬಿಡುಗಡೆಗೆ ಸೆನ್ಸಾರ್ ಮಂಡಳಿಗೆ ನಿರ್ದೇಶಿಸಿ ಎಂದು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಹಾಕಿತ್ತು. ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ವಿಭಾಗೀಯ ಪೀಠ, ‘ಚಿತ್ರಕ್ಕೆ ಯು-ಸರ್ಟಿಫಿಕೇಟ್ ನೀಡುವ ಮುನ್ನ ಸಿಖ್‌ ಸಂಸ್ಥೆಗಳು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಸೂಚಿಸಿದೆ. ಹೀಗಾಗಿ ನಾವು ಸಿನಿಮಾ ಬಿಡುಗಡೆಗೆ ಯಾವುದೇ ಸೂಚನೆ ನೀಡಲು ಆಗದು’ ಎಂದಿತು.

ಕಂಗನಾ ವಿಚಿತ್ರ ಪ್ರತಿಕ್ರಿಯೆ: ಈ ನಡುವೆ ಚಿತ್ರ ಬಿಡುಗಡೆಗೆ ಹೈಕೋರ್ಟ್‌ ಅನುಮತಿ ನೀಡದೇ ಹೋದರೂ, ಕಂಗನಾ ವಿಚಿತ್ರ ಪ್ರತಿಕ್ರಿಯೆ ನೀಡಿದ್ದು, ‘ಎಮರ್ಜೆನ್ಸಿ ಸಿನಿಮಾದ ಪ್ರಮಾಣಪತ್ರವನ್ನು ಕಾನೂನುಬಾಹಿರವಾಗಿ ತಡೆಹಿಡಿದಿದ್ದಕ್ಕಾಗಿ ಹೈಕೋರ್ಟ್ ಸೆನ್ಸಾರ್ ಮಂಡಳಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.

1975 ರಲ್ಲಿ ಇಂದಿರಾಗಾಂಧಿ ಸರ್ಕಾರವು ಹೇರಿದ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಆದರೆ ಇಂದಿರಾ ಅವರನ್ನು ಸಿಖ್‌ ಅಂಗರಕ್ಷಕರು ಕೊಂದ ಕಾರಣ ಚಿತ್ರದಲ್ಲಿ ಸಿಖ್ಖರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಸಿಖ್ಖರ ಉನ್ನತ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಆಕ್ಷೇಪ ಎತ್ತಿದೆ. ಇದು ಸೆ.6ರಂದು ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದ ಕಂಗನಾಗೆ ಅಡ್ಡಿಯಾಗಿದೆ.

ಹಸೀನಾ ವಿರುದ್ಧ ಮತ್ತೆರೆಡು ಕೊಲೆ ಕೇಸು: ರಾಜೀನಾಮೆ ಬಳಿಕ 94 ಕೇಸು ದಾಖಲು!

ಢಾಕಾ: ಬಾಂಗ್ಲಾದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾರ ವಿರುದ್ಧ ಬುಧವಾರ ಮತ್ತೆ 2 ಕೊಲೆ ಪ್ರಕರಣಗಳು ದಾಖಲಿಸಲಾಗಿದೆ. ಮೀಸಲು ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಸಂಭವಿಸಿದ ಸಾವುಗಳ ಸಂಬಂಧ ಈ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ರಾಜೀನಾಮೆಯ ಬಳಿಕ ಅವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ 94ಕ್ಕೆ ತಲುಪಿದಂತಾಗಿದೆ. ಪ್ರತಿಭಟನೆ ವೇಳೆ ಅಸುನೀಗಿದ ಢಾಕಾ ನಿವಾಸಿಯೊಬ್ಬರ ಪತ್ನಿ ಈ ಕುರಿತು ಹಸೀನಾ ಸೇರಿದಂತೆ 26 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

==

8 ಜನರ ಬಲಿಪಡೆದ ನರ ಹಂತಕ ತೋಳ ಹತ್ಯೆಗೆ 9 ಶೂಟರ್‌ಗಳ ನೇಮಕ

ಬಹ್ರೈಚ್‌: ಉತ್ತರಪ್ರದೇಶ ಬಹ್ರೈಚ್‌ ಅರಣ್ಯಪ್ರದೇಶದ ಸುತ್ತಮುತ್ತ ಕಳೆದ 15 ದಿನಗಳಲ್ಲಿ 8 ಜನರನ್ನು ಬಲಿಪಡೆದಿರುವ ನರಹಂತಕ ತೋಳಗಳ ಹತ್ಯೆ ಮಾಡಲು 9 ಶಾರ್ಪ್‌ ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿದ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆಯ 6 ಹಾಗೂ ಪೊಲೀಸ್‌ ಇಲಾಖೆಯ 3 ಶೂಟರ್‌ಗಳನ್ನು ನೇಮಿಸಲಾಗಿದೆ. ಇವರನ್ನು ತಲಾ ಮೂವರಂತೆ ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ತೋಳ ಕಂಡ ತಕ್ಷಣ ಶೂಟ್‌ ಮಾಡುವುದು ಅಥವಾ ಅದನ್ನು ಹಿಡಿದು ಮೃಗಾಲಕ್ಕೆ ತೆರಳಿಸುವುದು ಈ ತಂಡಗಳ ಕಾರ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

==

ಕಂದಹಾರ್‌ ವಿಮಾನ ಅಪಹರಣ ಬಳಿಕ ಮುಸ್ಲಿಂ ದ್ವೇಷದ ಭೀತಿ ಕಾಡಿತ್ತು: ನಟ ನಾಸಿರುದ್ದೀನ್‌

ನವದೆಹಲಿ: 1999ರ ಕಂದಹಾರ್‌ ವಿಮಾನ ಹೈಜಾಕ್‌ ಘಟನೆ ಆಧಾರಿತ ಐಸಿ814 ಚಿತ್ರ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ನಟ ನಾಸೀರುದ್ದೀನ್‌ ಆ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ‘ವಿಮಾನ ಅಪಹರಣ ನಡೆದಾಗ ಅದು ಸಮಾಜದಲ್ಲಿ ಇಸ್ಲಾಮೋಫೋಬಿಯಾ (ಮುಸ್ಲಿಮರ ಬಗೆಗಿನ ದ್ವೇಷ)ದ ಮತ್ತೊಂದು ಅಲೆ ಎಬ್ಬಿಸಬಹುದು ಎಂಬ ಭಯ ನನ್ನನ್ನು ಕಾಡಿತ್ತು. ಸುದೀರ್ಘ ಕಾಲ ನನ್ನಲ್ಲಿ ಆ ಭಾವನೆ ಹಾಗೆಯೇ ಉಳಿದುಕೊಂಡಿತ್ತು’ ಎಂದು ಹೇಳಿದ್ದಾರೆ.

ಇದಕ್ಕೆ ಬಿಜೆಪಿ ಹಾಗೂ ಶಿವಸೇನೆ ಕಿಡಿ ಕಾರಿವೆ. ‘ಅಪಹರಣವಾದ ವಿಮಾನದಲ್ಲಿದ್ದ 200 ಪ್ರಯಾಣಿಕರ ಸುರಕ್ಷತೆ ಬಗ್ಗೆ ಮಾತನಾಡದ ನಾಸಿರುದ್ದೀನ್‌, 74 ವರ್ಷಗಳ ಕಾಲ ಭಾರತದ ಶ್ರೀಮಂತ ಹಾಗೂ ಪ್ರಸಿದ್ಧ ವ್ಯಕ್ತಿಯಾಗಿ ಬದುಕಿಯೂ ಇಸ್ಲಾಮೋಫೋಬಿಯಾದ ಕುರಿತು ಮಾತನಾಡಿರುವುದು ಆಘಾತಕಾರಿ. ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವುದೇ ಅವರ ಪ್ರವೃತ್ತಿಯಾಗಿದೆ’ ಎಂದು ಶಿವಸೇನೆ ವಕ್ತಾರ ಕೃಷ್ಣಾ ಹೆಗಡೆ ಹೇಳಿದ್ದಾರೆ.

==

ಕಸ ಗುಡಿಸಲು 40,000 ಡಿಗ್ರಿ 6000 ಪಿಜಿ ಅಭ್ಯರ್ಥಿಗಳ ಅರ್ಜಿ!

ಚಂಡೀಗಢ: ದೇಶದಲ್ಲಿ ಯುವಜನರು ಕೆಲಸಕ್ಕಾಗಿ ಅದೆಷ್ಟು ಹಾತೊರೆಯುತ್ತಿದ್ದಾರೆ ಎಂಬುದಕ್ಕೆ ಇದೊಂದು ಒಳ್ಳೆ ಉದಾಹರಣೆ. ಹರ್ಯಾಣದಲ್ಲಿ ಕಸ ಗುಡಿಸುವ ಹುದ್ದೆಗೆ ಆ.6ರಿಂದ ಸೆ.2ರವರೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಬರೋಬ್ಬರಿ 40,000 ಪದವೀಧರರು, 6,000 ಸ್ನಾತಕೋತ್ತರ ಪದವೀಧರರು ಮತ್ತು 1.12 ಲಕ್ಷ 12ನೇ ತರಗತಿ ಮುಗಿಸಿದವರು ಅರ್ಜಿ ಹಾಕಿದ್ದಾರೆ. ಈ ಹುದ್ದೆಗೆ ಬಂದ ಅರ್ಜಿಗಳ ಪೈಕಿ ಪದವೀಧರರೇ ಅತಿ ಹೆಚ್ಚು ಪ್ರಮಾಣದಲ್ಲಿದ್ದಾರೆ.

ಈ ಬಗ್ಗೆ ಉದ್ಯೋಗ ಆಕಾಂಕ್ಷಿ ಮನೀಶ್‌ ಕುಮಾರ್‌ ಮಾತನಾಡಿದ್ದು, ‘ನಾನು ಬಿಸಿನೆಸ್‌ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವೀಧರ, ನನ್ನ ಮಡದಿ ಶಾಲಾ ಶಿಕ್ಷಕಿ. ಇಬ್ಬರೂ ಅರ್ಜಿ ಹಾಕಿದ್ದೇವೆ. ನನ್ನ ಮಡದಿಗೆ ತಿಂಗಳೂ ಪೂರ್ತಿ ದಿನಕ್ಕೆ 9 ತಾಸು ದುಡಿದರೂ ಕೇವಲ 10,000 ರು. ಸಂಬಳ, ಅದೇ ಇಲ್ಲಿ 15000 ರು. ಕೊಡುತ್ತಾರೆ. ಜೊತೆಗೆ ಇಲ್ಲಿ ಇಡೀ ದಿನ ದುಡಿಯುವ ಅಗತ್ಯವಿಲ್ಲ. ಮಿಕ್ಕ ಸಮಯದಲ್ಲಿ ಬೇರೆ ಉದ್ಯೋಗ ಮಾಡಬಹುದಾಗಿದೆ’ ಹೀಗಾಗಿ ಇಬ್ಬರೂ ಅರ್ಜಿ ಹಾಕಿದ್ದೇವೆ’ ಎಂದು ಹೇಳಿದ್ದಾರೆ.